ಮುಖ್ಯಾಧ್ಯಾಪಕನಿಂದ ದೈಹಿಕ ಕಿರುಕುಳ!

ಅಂಕೋಲಾ: ಸಮಾಜಕ್ಕೆ ಆದರ್ಶಪ್ರಾಯರಾಗಬೇಕಿದ್ದ ಶಿಕ್ಷಕನೇ ಸ್ವತಃ ವಿದ್ಯಾರ್ಥಿಗಳಿಗೆ ದೈಹಿಕ ಕಿರುಕುಳ ನೀಡಿದ ಘಟನೆ ತಾಲೂಕಿನ ಬೋಳೆ ಹೊಸಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದಿದೆ.
ಶಾಲಾ ಮುಖ್ಯಾಧ್ಯಾಪಕ ಶೇಖರ ಗಾಂವಕರ ವಿದ್ಯಾರ್ಥಿನಿಯರಿಗೆ ದೈಹಿಕ ಕಿರುಕುಳ ನೀಡಿದ ಆರೋಪಿ. ಶಾಲೆಯಲ್ಲಿ ಒಟ್ಟು 34 ವಿದ್ಯಾರ್ಥಿಗಳಿದ್ದು, 19 ಬಾಲಕ, 15 ಬಾಲಕಿಯರಿದ್ದಾರೆ. ಇಬ್ಬರು ಶಿಕ್ಷಕರು, ಒಬ್ಬ ಶಿಕ್ಷಕಿಯಿದ್ದಾರೆ. ಮುಖ್ಯಾಧ್ಯಾಪಕ ಶೇಖರ ಗಾಂವಕರ ಈ ಹಿಂದೆಯೂ ವಿದ್ಯಾರ್ಥಿನಿಯರಿಗೆ ದೈಹಿಕ ಕಿರುಕುಳ ನೀಡಿದ ಆರೋಪವಿದೆ. ಹಳೇ ಚಾಳಿ ಮತ್ತೆ ಮುಂದುವರಿಸಿದ ಕಾರಣ ಪಾಲಕರು ಹಾಗೂ ಸಾರ್ವಜನಿಕರು ಮುಖ್ಯಾಧ್ಯಾಪಕನಿಗೆ ದಿಗ್ಬಂಧನ ಹಾಕಿದರು.
ಸ್ಥಳಕ್ಕೆ ಪಿಎಸ್​ಐ ಶ್ರೀಧರ ಎಸ್.ಆರ್, ಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ವಿದ್ಯಾರ್ಥಿಗಳನ್ನು ವಿಚಾರಿಸಿದಾಗ, ‘ಮುಖ್ಯಾಧ್ಯಾಪಕ ಶೇಖರ ಅನೇಕ ಬಾರಿ ದೈಹಿಕ ಕಿರುಕುಳ ಕೊಟ್ಟು, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾನೆ. ಹೀಗಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಕಿರುಕುಳಕ್ಕೆ ಒಳಗಾದ ವಿದ್ಯಾರ್ಥಿನಿಯರು ಹೇಳಿಕೆ ನೀಡಲು ಸಿದ್ಧರಿದ್ದಾರೆ ಶಿಕ್ಷಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಪಾಲಕರು ಹಾಗೂ ಸಾರ್ವಜನಿಕರು ಲಿಖಿತವಾಗಿ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಪಾಲಕರಾದ ತುಳಸಿ ಎಂ. ಗೌಡ, ಮಾದೇವಿ ಕೆ. ಗೌಡ, ಭವಾನಿ ಪಿ. ಗೌಡ, ಕಮಲಾ ವಿ. ಗೌಡ, ಉಮೇಶ ಎಂ. ಗೌಡ, ಮಾಣಿ ಕೆ. ಗೌಡ, ಚಂದ್ರು ಪಿ. ಗೌಡ, ಪಾಂಡುರಂಗ ಗೌಡ, ಸುರೇಶ ಹುಲಿಯಪ್ಪ ಗೌಡ, ರವೀಂದ್ರ ಬಿ. ಗೌಡ, ಸುಧಾಕರ ಕೆ. ಗೌಡ, ಮಂಜುನಾಥ ಜಿ. ಗೌಡ, ಗ್ರಾಪಂ ಸದಸ್ಯ ವಿಘ್ನೕಶ್ವರ ಎಸ್. ಗೌಡ ಸೇರಿದಂತೆ ಇತರರು ಇದ್ದರು.

“ಈಗಾಗಲೇ ಆರೋಪಿ ಮುಖ್ಯಾಧ್ಯಾಪಕ ಶೇಖರ ಗಾಂವಕರನನ್ನು ವಶಕ್ಕೆ ಪಡೆಯಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಂದು ವಿದ್ಯಾರ್ಥಿನಿಯರಿಗೆ ಕೌನ್ಸೆಲಿಂಗ್ ಮಾಡಿ ಹೇಳಿಕೆ ನೀಡಿದ ನಂತರ ಕಾನೂನು ಕ್ರಮ ಜರುಗಿಸಲಾಗುವುದು.”
| ಶ್ರೀಧರ ಎಸ್.ಆರ್. ಪಿಎಸ್​ಐ, ಅಂಕೋಲಾ
“ಇಂತಹ ಶಿಕ್ಷಕನ ವಿರುದ್ಧ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಈತನನ್ನು ಬೇರೆ ಶಾಲೆಗೆ ವರ್ಗಾಯಿಸಿದರೂ ತನ್ನ ವಿಕೃತಿಯನ್ನು ಮುಂದುವರೆಸಿದರೂ ಅಚ್ಚರಿಯಿಲ್ಲ. ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಲು ಹಿಂಜರಿದರೆ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದಿರುವ ಸಾಧ್ಯತೆಯಿದೆ.”
| ನಾರಾಯಣ ನಾಯಕ, ವಂದಿಗೆ ಗ್ರಾಪಂ ಅಧ್ಯಕ್ಷರು.