ಭಟ್ಕಳ: ಜಾಲಿ ಪಟ್ಟಣ ಪಂಚಾಯಿತಿ ರಚನೆಯಾಗಿ 5 ವರ್ಷ ಕಳೆದರೂ ಇಲ್ಲಿಯ ತನಕ ಸರ್ಕಾರ ಕಾಯಂ ಮುಖ್ಯಾಧಿಕಾರಿ, ಇಂಜಿನಿಯರ್ ಅವರನ್ನು ನೇಮಿಸಿಲ್ಲ ಎಂದು ಜಾಲಿ ಪಟ್ಟಣ ಪಂಚಾಯಿತಿಯ ಸದಸ್ಯರು ಸಾಂಕೇತಿಕವಾಗಿ ಶನಿವಾರ ಪ್ರಭಟನೆ ನಡೆಸಿ, ತಹಸೀಲ್ದಾರ್ ಎಸ್. ರವಿಚಂದ್ರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಾಲಿ ಪಟ್ಟಣ ಪಂಚಾಯಿತಿ 2015ರ ಸೆ.14ರಂದು ರಚನೆಯಾಗಿದೆ. ಒಟ್ಟು 20 ಸದಸ್ಯರಿದ್ದು, ಸಾರ್ವಜನಿಕರ ಕೆಲಸ, ಅಭಿವೃದ್ಧಿ ಕೆಲಸಗಳಲ್ಲಿ ಯಶಸ್ಸು ಸಿಗುತ್ತಿಲ್ಲ. ಆರಂಭದಿಂದಲೂ ಇಲ್ಲಿಯ ತನಕ ಜಾಲಿ ಪ.ಪಂ.ಗೆ ಪ್ರಭಾರಿ ಮುಖ್ಯಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರು ಎರಡು ಕಡೆಗಳಲ್ಲಿ ಕೆಲಸ ನಿರ್ವಹಿಸಬೇಕಿದೆ. ಅವರಿಗೆ ಸಮಯಕ್ಕೆ ಸರಿಯಾಗಿ ಭೇಟಿಯಾಗಲು, ವಾರ್ಡ್ಗಳ ಅಭಿವೃದ್ಧಿ ಕಾರ್ಯ ನಡೆಸಲು, ಕರ ಆಕರಣೆಯಲ್ಲಿ ವ್ಯತ್ಯಾಸ ಅಥವಾ ಯಾವುದೇ ಸಮಸ್ಯೆ ಇದ್ದಲ್ಲಿ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಪಪಂ ಸದಸ್ಯರಾದ ಅಬ್ದುರ್ ರಹೀಮ್ ಬಿಲಾಲ್ ಅಹ್ಮದ್, ಪುರಂದರ ಮೊಗೇರ, ಸಿ.ಎಂ. ದೇವಾಡಿಗ, ಗಣಪಯ್ಯ ಗೊಂಡ, ಮಮ್ತಾಜ್ ಬೇಗಮ್ ಸೈಯದ್ ರೇಷ್ಮಾ, ಫಾತಿಮಾ ಮೆಹಬೂಬಾ, ಅಬ್ತಾಬ್ ದಾಮೂದಿ ಇತರರು ಇದ್ದರು.