ಮೈಸೂರು: ಎಂಡಿಇಎಸ್ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವ ನಗರದ ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯಶಿಕ್ಷಕರು ವಿದ್ಯಾರ್ಥಿಗಳಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಮೈಸೂರು ವಿಭಾಗೀಯ ಕ್ಯಾಥೋಲಿಕ್ ಕ್ರಿಶ್ಚಿಯನ್ ಅಸೋಸಿಯೇಷನ್ ಆರೋಪಿಸಿದೆ.
ಮಕ್ಕಳು ಶಾಲೆಗೆ ಐದು ನಿಮಿಷ ತಡವಾಗಿ ಬಂದರೂ ಅವರನ್ನು ಆ ದಿನ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಸಣ್ಣ ಪುಟ್ಟ ವಿಚಾರಗಳಿಗೆ 15 ದಿನ ಮಕ್ಕಳನ್ನು ಶಾಲೆಯಿಂದ ಅಮಾನತ್ತಿನಲ್ಲಿ ಇಟ್ಟು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಸಣ್ಣ ಪುಟ್ಟ ವಿಚಾರಗಳಿಗೆ 25 ರೂಪಾಯಿಯಂತೆ ಮಕ್ಕಳಿಗೆ ದಂಡ ವಿಧಿಸುವುದು ನಡೆದಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಜೆ.ಸ್ಟೀಫನ್ ಸುಜೀತ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಶಾಲಾ ಸಮಯ ಬೆಳಗ್ಗೆ 10 ರಿಂದ ಸಂಜೆ 4 ಗಂಟೆ ವರಗೆ ಇರಬೇಕು ಎಂದು ಸರ್ಕಾರದ ನಿಯಮವನ್ನು ಸಾಳಿಗೆ ತೋರಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಮಕ್ಕಳನ್ನು ತರಗತಿಯಲ್ಲಿ ಇರಿಸಿಕೊಳ್ಳುವ ಮೂಲಕ ತೀವ್ರ ಒತ್ತಡ ತರುತ್ತಿದ್ದಾರೆ. ಈ ಕುರಿತು ಡಿಡಿಪಿಐ ಹಾಗೂ ಬಿಇಒ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕು. ಶಿಕ್ಷಕರಿಂದ ಅಗುತ್ತಿರುವ ಅನಗತ್ಯ ಕಿರುಕುಳ ತಪ್ಪಿಸಬೇಕು, ಪೋಷಕರಿಗೆ ನೋಟಿಸ್ ನೀಡುವುದು, ದಂಡ ವಿಧಿಸುವುದನ್ನು ತಪ್ಪಿಸಬೇಕು. ಇಲ್ಲವಾದರೆ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಸಂಘಟನೆಯ ಮರಿಯಾ ಫ್ರಾನ್ಸಿಸ್, ಬಾರ್ಬರಾ ಬೇಯರ್, ಸೈಮನ್, ವಿದ್ಯಾರ್ಥಿ ಪೋಷಕ ಗ್ಯಾಬ್ರಿಯಲ್ ಇದ್ದರು.