ಲೋಕಾಪುರ: ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಅಥವಾ ಅಸ್ತಿತ್ವದಲ್ಲಿರುವ ಕಂದಾಯ ಗ್ರಾಮದ ಭಾಗವಾಗಿ ಪರಿವರ್ತಿಸುವ ಜತೆಗೆ ಅಲ್ಲಿಯ ನಿವಾಸಿಗಳಿಗೆ ವಾಸ್ತವ್ಯದ ಹಕ್ಕು ದಾಖಲೆಗಳನ್ನು ಒದಗಿಸಿ, ಅಂತಹ ಕುಟುಂಬಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಕಂದಾಯ ನಿರೀಕ್ಷಕ ಸತೀಶ ಬೇವೂರ ಹೇಳಿದರು.
ಪಟ್ಟಣದ ಸೇವಾಲಾಲ್ ದೇವಸ್ಥಾನದಲ್ಲಿ ಮಾತನಾಡಿದ ಅವರು, ಖಾಸಗಿ ಜಮೀನುಗಳಲ್ಲಿ ನೆಲೆಸಿರುವ ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮದ ಭಾಗವಾಗಿ ಪರಿವರ್ತಿಸಿ ಅಲ್ಲಿಯ ನಿವಾಸಿಗಳಿಗೆ ಹಕ್ಕುಪತ್ರವನ್ನು ನೀಡಲು ಸರ್ಕಾರ ಆದೇಶಿಸಿದೆ. ಸರ್ಕಾರವು ಕರ್ನಾಟಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕಲಂ 38-ಎ ಮತ್ತು ನಿಯಮ 9-ಸಿ ಸೇರ್ಪಡೆಗೊಳಿಸುವ ಮೂಲಕ ಖಾಸಗಿ ಜಮೀನಿನಲ್ಲಿ ನೆಲೆಗೊಂಡಿರುವ ದಾಖಲೆ ರಹಿತ ಜನವಸತಿ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ನೀಡಲು ಅವಕಾಶ ಕಲ್ಪಿಸಿದೆ ಎಂದರು.
ಖಾಸಗಿ ಜಮೀನುಗಳಲ್ಲಿ ನೆಲೆಗೊಂಡಿರುವ ಜನವಸತಿಗಳನ್ನು ಕಂದಾಯ ಗ್ರಾಮದ ಭಾಗ, ಬಡಾವಣೆ ಮಾಡಲು ಸಾರ್ವಜನಿಕರ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶ ನೀಡಲಾಗಿತ್ತು. ಎಲ್ಲರ ಸಲಹೆ ಮೇರೆಗೆ ದುರ್ಗಾ ಬಡವಾಣೆ ಮಾಡಲು ಎಲ್ಲರೂ ಸಹಮತ ವ್ಯಕ್ತಪಡಿಸಿದರು.
ಸ್ಥಳೀಯ ನಿವಾಸಿ ಗೋಪಾಲ ಲಮಾಣಿ, ಡಾ. ಲೋಕಣ್ಣ ಭಜಂತ್ರಿ ಮಾತನಾಡಿ, ಸರ್ಕಾರ ಹಕ್ಕು ಪತ್ರ ವಿತರಣೆ ಪ್ರಕ್ರಿಯೆ ಮತ್ತು ಹೊಸ ಕಂದಾಯ ಗ್ರಾಮ ಘೋಷಣೆ ಪ್ರಕ್ರಿಯೆಯನ್ನು ಜೊತೆ ಜೊತೆಯಾಗಿ ನಿಯಮಾನುಸಾರ ಕ್ರಮಕ್ಕೆ ಮುಂದಾಗಿರುವುದು ಸಾರ್ವಜನಿಕರಿಗೆ ಸಂತಸ ತಂದಿದೆ ಎಂದರು.
ಉಪತಹಸೀಲ್ದಾರ್ ಬಿ.ಎಸ್. ರಂಗಣ್ಣವರ, ಗ್ರಾಮ ಆಡಳಿತಾಧಿಕಾರಿ ಪ್ರಕಾಶ ಸಿರಕಾನಿ, ವಿಠ್ಠಲ ಕನಸಗೇರಿ, ದುರ್ಗಪ್ಪ ಭಜಂತ್ರಿ, ಸುರೇಶ ಲಮಾಣಿ, ವೆಂಕಪ್ಪ ನಾವಲಗಿ, ಮಾರುತಿ ಬಂಡಿವಡ್ಡರ, ರಾಮಣ್ಣಾ ಲಮಾಣಿ, ಸಂಜು ಲಮಾಣಿ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.