ಮುಖ್ಯಪೇದೆ ಶಸ್ತ್ರಚಿಕಿತ್ಸೆ, 21 ಲಕ್ಷ ರೂ. ಬಿಡುಗಡೆ: ವಿಜಯವಾಣಿ ವರದಿ ಪರಿಣಾಮ

ಬೆಂಗಳೂರು: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ವಿಜಯಪುರದ ಡಿಎಆರ್ ಮುಖ್ಯಪೇದೆ ಸುರೇಶ್ ಪಿ. ಅರಕೇರಿ ಅವರಿಗೆ ಯಕೃತ್ ಬದಲಾಯಿಸಲು ಆರೋಗ್ಯ ಭಾಗ್ಯ ಯೋಜನೆಯಲ್ಲಿ 21 ಲಕ್ಷ ರೂ. ಬಿಡುಗಡೆಗೆ ಪೊಲೀಸ್ ಇಲಾಖೆ ಅನುಮತಿ ಕೊಟ್ಟಿದೆ.

ಸರ್ಕಾರ ಹಣ ಪಾವತಿಸಿಲ್ಲ ಎಂಬ ಕಾರಣಕ್ಕೆ ಆರೋಗ್ಯ ಭಾಗ್ಯ ಯೋಜನೆಯಲ್ಲಿ ಸುರೇಶ್ ಅವರಿಗೆ ಚಿಕಿತ್ಸೆ ಕೊಡಲು ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ನಿರಾಕರಿಸಿತ್ತು. ಈ ವಿಚಾರವನ್ನು ವಿಜಯವಾಣಿ ಮಾ.12ರಂದು ವಿಶೇಷ ವರದಿ ಪ್ರಕಟಿಸಿ ಇಲಾಖೆ ಗಮನ ಸೆಳೆದಿತ್ತು. ನಾರಾಯಣ ಹೃದಯಾಲಯದಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದ್ದು, ಹಣ ಬಿಡುಗಡೆ ಮಾಡುವಂತೆ ಪೊಲೀಸ್ ಇಲಾಖೆ ಅನುಮೋದನೆ ನೀಡಿದೆ.

ಸುರೇಶ್ ಅವರಿಗೆ ಲಿವರ್ ಸಮಸ್ಯೆ ಕಾಣಿಸಿಕೊಂಡಿದ್ದು, ಎಂಡೋಸೊ್ಕೕಪಿ, ಇನ್ನಿತರ ಪರೀಕ್ಷೆ ನಡೆಸಿದ ವೈದ್ಯರು ಲಿವರ್ ಸಮಸ್ಯೆ ಜತೆಗೆ ಎರಡೂ ಕಿಡ್ನಿಗಳು ವಿಫಲವಾಗಿವೆ ಎಂದು ಹೇಳಿದ್ದರು. ಸರ್ಕಾರ ಹಣ ಬಾಕಿ ಉಳಿಸಿಕೊಂಡಿದ್ದು, ವೈಯಕ್ತಿಕವಾಗಿ ಹಣ ಪಾವತಿಸಿದರೆ ಚಿಕಿತ್ಸೆ ಆರಂಭಿಸುತ್ತೇವೆ ಎಂದು ವೈದ್ಯರು ಸೂಚಿಸಿದ್ದರು. ದಿಕ್ಕು ತೋಚದಂತಾದ ಕುಟುಂಬ ಸದಸ್ಯರು ಅಷ್ಟು ಹಣ ಪಾವತಿಸಲು ಶಕ್ತರಿಲ್ಲದ ಕಾರಣ ವಾಪಸ್ ಊರಿಗೆ ಕರೆದೊಯ್ದಿದ್ದರು.

ಬಳಿಕ ನಾರಾಯಣ ಹೃದಯಾಲಯದ ವೈದ್ಯರು ಯಕೃತ್ ಶಸ್ತ್ರಚಿಕಿತ್ಸೆ ನಡೆಸಬೇಕು. ಅದಕ್ಕಾಗಿ 21 ಲಕ್ಷ ರೂ. ವೆಚ್ಚವಾಗಲಿದೆ ಎಂದು ಸಲಹೆ ನೀಡಿದ್ದರು. ಆರೋಗ್ಯ ಭಾಗ್ಯ ಯೋಜನೆಯಡಿ 14 ಲಕ್ಷ ರೂ. ಮಾತ್ರ ಮಂಜೂರು ನಿಯಮವಿದೆ. ಹೀಗಾಗಿ ಉಳಿದ 7 ಲಕ್ಷ ರೂ. ಅನ್ನು ಪೊಲೀಸ್ ವೆಲ್​ಫೇರ್ ಟ್ರಸ್ಟ್​ನಿಂದ ನೀಡಲು ನಿರ್ಧರಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಒಪ್ಪಿಗೆ ಸೂಚಿಸಿದ್ದಾರೆ. ಇದಲ್ಲದೆ, 21 ಲಕ್ಷ ರೂ. ಅನ್ನು ಬಿಡುಗಡೆ ಮಾಡುವುದಾಗಿ ನಾರಾಯಣ ಹೃದಯಾಲಯಕ್ಕೆ ಪತ್ರ ಬರೆದು ಶಸ್ತ್ರ ಚಿಕಿತ್ಸೆ ನಡೆಸುವಂತೆ ಹೇಳಿದ್ದಾರೆ.

Leave a Reply

Your email address will not be published. Required fields are marked *