ಮುಕ್ಕಾಟೀರ, ಶಾಂತೆಯಂಡ ತಂಡಕ್ಕೆ ಜಯ

ನಾಪೋಕ್ಲು: ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಗ್ರಾಮ ವ್ಯಾಪ್ತಿಯ ಕೊಡವ ತಂಡಗಳ ನಡುವೆ ನಡೆಯುತ್ತಿರುವ ಹೈಲ್ಯಾಂಡರ್ಸ್‌ ಕಪ್ ಹಾಕಿ ಪಂದ್ಯಾವಳಿಯ ಶುಕ್ರವಾರದ ಪಂದ್ಯದಲ್ಲಿ ಮುಕ್ಕಾಟೀರ (ಮೂವತೋಕ್ಲು), ಶಾಂತೆಯಮಡ ತಂಡಗಳು ಗೆಲುವು ಸಾಧಿಸಿದವು.

ಕಕ್ಕಬ್ಬೆಯ ದಿ ಹೈಲ್ಯಾಂಡರ್ಸ್‌ ಫ್ಯಾಮಿಲಿ ಕ್ಲಬ್ ಆಶ್ರಯದಲ್ಲಿ ಜನರಲ್ ಕೆ.ಎಸ್. ತಿಮ್ಮಯ್ಯ ತಾಲೂಕು ಕ್ರೀಡಾಂಗಣದಲ್ಲಿ ಹಾಕಿ ಪಂದ್ಯಾವಳಿ ನಡೆಯುತ್ತಿದೆ.

ಮುಕ್ಕಾಟೀರ ತಂಡ ಪಾಸೂರ ತಂಡವನ್ನು ಸಡನ್‌ಡೆತ್‌ನಲ್ಲಿ 5-4 ಗೋಲುಗಳ ಅಂತರದಿಂದ ಸೋಲಿಸಿತು. ನಿಗದಿತ ಅವಧಿಯಲ್ಲಿ ಎರಡು ತಂಡಗಳು 1-1 ಗೋಲಿನ ಸಮಬಲ ಸಾಧಿಸಿದವು. 7ನೇ ನಿಮಿಷದಲ್ಲಿ ರತನ್ ಗೋಲು ಬಾರಿಸುವುದರ ಮೂಲಕ ಮುಕ್ಕಾಟೀರ ತಂಡಕ್ಕೆ 1-0 ಗೋಲಿನ ಮುನ್ನಡೆ ತಂದುಕೊಟ್ಟರು. 39ನೇ ನಿಮಿಷದಲ್ಲಿ ಪಾಸೂರ ಮುತ್ತಮ್ಮ ಗೋಲು ಗಳಿಸುವುದರ ಮೂಲಕ ಪಂದ್ಯ 1-1 ಸಮಬಲ ಸಾಧಿಸುವಂತೆ ಮಾಡಿದರು. ಟೈಬ್ರೇಕರ್‌ನಲ್ಲಿ ಎರಡು ತಂಡಗಳು 3-3 ಗೋಲಿನ ಸಮಬಲ ಸಾಧಿಸಿದವು. ಪ್ರಥಮ ಸಡನ್ ಡೆತ್‌ನಲ್ಲಿಯೂ 1-1 ಸಮಬಲ ಸಾಧಿಸಿ, 2ನೇ ಸಡನ್ ಡೆತ್‌ನಲ್ಲಿ ಮುಕ್ಕಾಟೀರ ಗೆಲುವು ಸಾಧಿಸಿತು.

ಶಾಂತೆಯಂಡ ತಂಡ ಮಂದೇಯಂಡ ತಂಡವನ್ನು ಟೈಬ್ರೇಕರ್‌ನಲ್ಲಿ 5-4 ಗೋಲಿನಿಂದ ಪರಾಭವಗೊಳಿಸಿತು. ನಿಗದಿತ ಅವಧಿ ಪೂರ್ಣಗೊಳ್ಳುವ ವೇಳೆ ಎರಡು ತಂಡಗಳು 1-1 ಗೋಲಿನ ಸಮಬಲ ಸಾಧಿಸಿದ್ದವು. 12ನೇ ನಿಮಿಷದಲ್ಲಿ ಅಯ್ಯಣ್ಣ ಗೋಲು ಗಳಿಸುವುದರ ಮೂಲಕ ಮಂದೇಯಂಡ 1-0 ಗೋಲಿನ ಪ್ರಾರಂಭಿಕ ಮುನ್ನಡೆ ಸಾಧಿಸಿತು. 33ನೇ ನಿಮಿಷದಲ್ಲಿ ಶಾಂತೆಯಂಡ ತಂಡದ ನಿಶಾಂತ್ ಕುಶಾಲಪ್ಪ ಗೋಲು ಬಾರಿಸುವುದರ ಮೂಲಕ 1-1 ಗೋಲಿನಿಂದ ಪಂದ್ಯ ಡ್ರಾ ಆಗುವಂತೆ ಮಾಡಿದರು. ಟೈ ಬ್ರೇಕರ್‌ನಲ್ಲಿ ಶಾಂತೆಯಂಡ 5-4 ಗೋಲಿನ ಮೂಲಕ ಜಯಭೇರಿ ಸಾಧಿಸಿತು.

14 ವರ್ಷದೊಳಗಿನ ಬಾಲಕರ ಹಾಕಿ ಪಂದ್ಯಾವಳಿಯಲ್ಲಿ ಕಕ್ಕಬ್ಬೆಯ ಸ್ಟೆಪ್ಸ್ ಟೀಮ್ ಬ್ಲೂ ತಂಡವು ಸ್ಟೆಪ್ಸ್ ಟೀಮ್ ಆರೇಂಜ್ ತಂಡವನ್ನು 2-1 ಗೋಲಿನಿಂದ ಪರಾಭವಗೊಳಿಸಿತು.