ಮುಂದುವರಿದ ವಕಾರಸಾಲು ವಸ್ತುಗಳ ಸಾಗಣೆ

ಗದಗ: ನಗರಸಭೆ ಒಡೆತನದ ವಕಾರಸಾಲುಗಳ (ಸರ್ಕಾರಿ ಜಾಗ) ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದು, ಮಂಗಳವಾರ ಸಹ ಅಲ್ಲಿದ್ದ ಕಟ್ಟಡಗಳ ಕಟ್ಟಿಗೆ, ಕಬ್ಬಿಣ, ಬಿದಿರಿನ ಬೊಂಬುಗಳು ಮತ್ತಿತರ ವಸ್ತುಗಳ ಸಾಗಣೆ ಕಾರ್ಯ ನಡೆಯಿತು.

54 ವಕಾರಸಾಲುಗಳನ್ನು ಒಂದೇ ಅವಧಿಯಲ್ಲಿ ತೆರವು ಕಾರ್ಯಾಚರಣೆ ನಡೆದಿದ್ದರಿಂದ ಅವಶೇಷಗಳಡಿ ಸಾಕಷ್ಟು ತಗಡುಗಳು, ಕಟ್ಟಿಗೆಗಳು, ಪ್ಲಾಸ್ಟಿಕ್ ವಸ್ತುಗಳು ಸಿಲುಕಿದ್ದರಿಂದ ಅವುಗಳನ್ನು ಅಂಗಡಿಗಳ ಮಾಲೀಕರು ತಮ್ಮ ವಸ್ತುಗಳನ್ನು ಸ್ಥಳಾಂತರಿಸಿದರು. ಈ ವೇಳೆ ಕೂಲಿ ಕಾರ್ವಿುಕರಿಗೆ ಬೇಡಿಕೆ ಹೆಚ್ಚಿತ್ತು.

ಚಿಂದಿ ಆಯುವವರು, ಯುವಕರು, ಮಹಿಳೆಯರು ಕಟ್ಟಡದಲ್ಲಿದ್ದ ಕಬ್ಬಿಣದ ಸಳಿಗಳು, ತಗಡುಗಳು, ಕಟ್ಟಿಗೆಗಳು, ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಆಟೋ, ಟಂಟಂ ವಾಹನಗಳಲ್ಲಿ ತೆಗೆದುಕೊಂಡು ಹೋದರು. ನಗರಸಭೆಯವರು ಟ್ರ್ಯಾಕ್ಟರ್ ಮೂಲಕ ಕಲ್ಲು, ಮಣ್ಣು, ಇಟ್ಟಿಗೆ ಮತ್ತಿತರ ವಸ್ತುಗಳನ್ನು ಸಾಗಿಸಿದರು.

ತೆರವು ಕಾರ್ಯಾಚರಣೆಯಲ್ಲಿ ಅಳಿದುಳಿದ ಕಬ್ಬಿಣದ ವಸ್ತುಗಳನ್ನು ಮೋಡಕಾ ವ್ಯಾಪಾರಸ್ಥರ ಬಳಿ ಮಾರಾಟಕ್ಕೆ ತೆರಳುತ್ತಿರುವುದು ಕಂಡುಬಂತು. ಕಬ್ಬಿಣದ ವಸ್ತುಗಳು ಹೆಚ್ಚಿದ್ದರಿಂದ ವ್ಯಾಪಾರಸ್ಥರು ನಿತ್ಯ ಖರೀದಿಸುತ್ತಿದ್ದ ದರದಕ್ಕಿಂತ ಶೇ. 50ರಷ್ಟು ಕಡಿಮೆ ಕೇಳುತ್ತಿದ್ದರು. ನಿತ್ಯ ಕೆಜಿ ಮೋಡಕಾ ಕಬ್ಬಿಣಕ್ಕೆ 20 ರೂ. ಇತ್ತು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೋಡಕಾ ಕಬ್ಬಿಣ ತರುತ್ತಿದ್ದರಿಂದ ಕೆಜಿಗೆ 5ರಿಂದ 10 ರೂ. ಕೇಳುತ್ತಿದ್ದರು.

ವಕಾರಸಾಲುಗಳಲ್ಲಿನ ವಸ್ತುಗಳ ಸ್ಥಳಾಂತರಕ್ಕೆ ನಗರಸಭೆ, ಜಿಲ್ಲಾಡಳಿತವು ಪೌರಕಾರ್ವಿುಕರನ್ನು ನಿಗದಿಪಡಿಸಿದ್ದರೂ ಸ್ಥಳಾಂತರಿಸುವ ವಸ್ತುಗಳು ಅಧಿಕವಾಗಿದ್ದರಿಂದ ಕೆಲಸಗಾರರ ಅವಶ್ಯಕತೆ ಹೆಚ್ಚಿತ್ತು.

ತೆರವಾಗದ ಎರಡು ಕಟ್ಟಡಗಳು ಖರೀದಿ?

ಗದಗ ನಗರದಲ್ಲಿ ಶನಿವಾರ, ಭಾನುವಾರ ನಡೆಸಿದ ವಕಾರಸಾಲು ತೆರವು ಕಾರ್ಯಾಚರಣೆಯಲ್ಲಿ ಎರಡು ಕಟ್ಟಡಗಳು ಉಳಿದಿವೆ. ಅವುಗಳನ್ನು ಏಕೆ ನೆಲಸಮ ಮಾಡಿಲ್ಲ ಎಂಬ ಅನುಮಾನ ಸಾರ್ವಜನಿಕರಲ್ಲಿ ಶುರುವಾಗಿದೆ. ಈ ಎರಡು ಕಟ್ಟಡಗಳ ಮಾಲೀಕರು ಅಧಿಕೃತವಾಗಿ ನಗರಸಭೆ ಅನುಮತಿ ಪಡೆದು ಜಾಗ ಖರೀದಿ ಮಾಡಿಕೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಆದರೆ, ವಕಾರಸಾಲಿನಲ್ಲಿರುವ ಯಾವುದೇ ಜಾಗ ಖರೀದಿ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೂ ಇವೆರಡು ಕಟ್ಟಡಗಳನ್ನು ಹೇಗೆ ಖರೀದಿ ಮಾಡಿಕೊಡಲಾಯಿತು ಎಂದು ಅವಳಿ ನಗರದ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

‘ವಕಾರಸಾಲಿನಲ್ಲಿನ ಜಾಗ ಖರೀದಿಸಿದ್ದೇವೆಂದು ಎರಡು ಕಟ್ಟಡಗಳ ಮಾಲೀಕರು ದಾಖಲೆಗಳನ್ನು ತೋರಿಸುತ್ತಿದ್ದಾರೆ. ಆದರೆ, ಈ ಕುರಿತು ದಾಖಲೆಗಳ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಯಾವ ಮುಲಾಜಿಗೂ ಒಳಗಾಗುವುದಿಲ್ಲ. ಸರ್ಕಾರಿ ಆಸ್ತಿ ಸರ್ಕಾರದ ಸುಪರ್ದಿಗೆ ಬರಬೇಕು ಎಂಬ ಗುರಿಯೊಂದಿಗೆ ಕಾರ್ಯಾಚರಣೆ ಆರಂಭಿಸಲಾಗಿದೆ. ದಾಖಲೆಗಳ ಪರಿಶೀಲನೆ ಬಳಿಕ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

Leave a Reply

Your email address will not be published. Required fields are marked *