ಮುಂದುವರಿದ ರೈತರ ಹೋರಾಟ

ತಿಪಟೂರು: ನಗರದ ರಾಷ್ಟ್ರೀಯ ಹೆದ್ದಾರಿ 206ರ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಜ.11 ರಿಂದ ಧರಣಿ ಆರಂಭಿಸಿರುವ ರೈತರ ಹೋರಾಟ ಬುಧವಾರವೂ ಮುಂದುವರೆದಿದೆ.

ಪುಡಿಗಾಸು ಪರಿಹಾರ ನೀಡಿ ರೈತರಿಂದ ವಶಪಡಿಸಿಕೊಂಡ ಜಮೀನಿನಲ್ಲಿ ಕೋಟ್ಯಂತರ ವೆಚ್ಚ ಮಾಡಿ ರಸ್ತೆ ನಿರ್ವಿುಸಲು ಹೊರಟಿರುವ ಸರ್ಕಾರದ ನಡೆ ಸರಿಯಲ್ಲ ಎಂದು ಆರ್​ಕೆಎಸ್ ರಾಜ್ಯ ಸಂಘಟನೆ ಸದಸ್ಯ ಶಿವಕುಮಾರ್ ಆಕ್ರೋಶ ಹೊರಹಾಕಿದರು.

ರೈತರ ಸಾಲಮನ್ನಾ ಮಾಡಲು ಮೀನಮೇಷ ಎಣಿಸುವ ಸರ್ಕಾರ ಕಾಪೋರೇಟ್ ವಲಯದವರು ಮಾಡಿರುವ ಸಾಲ ವಸೂಲಾತಿ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದರು.

ಸರ್ಕಾರಕ್ಕೆ ರೈತರ ಸಂಕಷ್ಟ ಅರ್ಥವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಅನ್ನದಾತರುತಕ್ಕ ಉತ್ತರ ನೀಡಲಿದ್ದಾರೆ. ಸರ್ಕಾರದ ಧೋರಣೆ ಇದೇ ರೀತಿ ಮುಂದುವರೆದಲ್ಲಿ ಹೋರಾಟದ ದಿಕ್ಕು ಬದಲಾಗಲಿದೆ ಎಂದು ಎಚ್ಚರಿಸಿದರು.

ಮುಖಂಡರಾದ ಮನೋಹರ್ ಪಾಟೀಲ್. ಅಲ್ಲಾಬಕಶ್, ಶ್ರೀಕಾಂತ್, ಲೋಕೇಶ್, ದೇವರಾಜು ಮತ್ತಿತರರಿದ್ದರು. ಉಪವಿಭಾಗಾಧಿಕಾರಿ ಪರವಾಗಿ ಕಚೇರಿ ಮುಖ್ಯಸ್ಥರು ಮನವಿ ಪತ್ರ ಸ್ವೀಕರಿಸಿದರು.