ಮುಂದುವರಿದ ಮಳೆ ಆರ್ಭಟ

ಸಿದ್ದಾಪುರ: ಹಲವು ದಿನಗಳಿಂದ ಸುರಿಯುತ್ತಿದ್ದ ಮಳೆ ಗುರುವಾರ ಬೆಳಗ್ಗೆಯಿಂದ ತನ್ನ ಆರ್ಭಟ ಸ್ವಲ್ಪ ಕಡಿಮೆ ಮಾಡಿತ್ತಾದರೂ ಮಧ್ಯಾಹ್ನ ನಂತರ ಗಾಳಿಯೊಂದಿಗೆ ಪುನಃ ಮಳೆ ಬೀಳಲಾರಂಭಿಸಿದೆ.

ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಹಳಿಯಾಳ ಗಣಪತಿ ಕನ್ನ ನಾಯ್ಕ ಇವರ ಮನೆಯ ಹಿಂದಿನ ಧರೆ ಕುಸಿದು ಮನೆಯ ಗೋಡೆಗೆ ಬಂದು ನಿಂತಿದೆ. ವಾಜಗದ್ದೆ ಸಮೀಪದ ಹುಲಿಮನೆ ಊರಿನ ಚಿಬ್ನೂರಿಗೆ ತೆರಳುವ ರಸ್ತೆ ಪಕ್ಕದ ಧರೆ ಕುಸಿದು ಸಂಚಾರಕ್ಕೆ ತೊಂದರೆ ಉಂಟಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಎಸ್.ಆರ್. ಗೌಡ, ಜಿಪಂ ಸದಸ್ಯ ಎಂ.ಜಿ. ಹೆಗಡೆ, ಗ್ರಾಪಂ ಸದಸ್ಯ ಮಧುಕೇಶ್ವರ ಹೆಗಡೆ ಬಕ್ಕೆಮನೆ ಭೇಟಿ ನೀಡಿ ಪರಿಶೀಲಿಸಿದರು. ತಾಲೂಕಿನಲ್ಲಿ 85.8 ಮಿ.ಮೀ ಮಳೆ ಬಿದ್ದಿದ್ದು, ಒಟ್ಟು ಈವರೆಗೆ 1397 ಮಿ.ಮೀ ಮಳೆ ಬಿದ್ದು ದಾಖಲಾಗಿದೆ.

ಅವಾಂತರ ಸೃಷ್ಟಿಸಿದ ಧಾರಾಕಾರ ಮಳೆ

ಯಲ್ಲಾಪುರ: ತಾಲೂಕಿನಲ್ಲಿ 3-4 ದಿನಗಳಿಂದ ಸುರಿಯುತ್ತಿರುವ ಮಳೆ ಗುರುವಾರವೂ ಮುಂದುವರಿದಿದೆ. ಗ್ರಾಮೀಣ ಭಾಗಗಳಲ್ಲಿ ವಿದ್ಯುತ್​ಲೈನ್​ಗಳ ಮೇಲೆ ಮರ ಉರುಳಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಗ್ರಾಮೀಣ ರಸ್ತೆಗಳಲ್ಲಿ ಮರ, ಟೊಂಗೆಗಳು ಬಿದ್ದು ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಭಾರಿ ಮಳೆಯಿಂದಾಗಿ ಕೃಷಿ ಕಾರ್ಯಕ್ಕೂ ಅಲ್ಪ ಹಿನ್ನಡೆ ಉಂಟಾಗಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿದು ನೀರು ಗದ್ದೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ.

ಸಂಪರ್ಕ ಸಮಸ್ಯೆ ಆತಂಕ: ತಾಲೂಕಿನಲ್ಲಿ ಮಳೆಯ ಪ್ರಮಾಣ ಗುರುವಾರವೂ ತೀವ್ರವಾಗಿ ಮುಂದುವರಿದಿದೆ. ಆಗೊಮ್ಮೆ ಈಗೊಮ್ಮೆ ಮಳೆ ನಿಂತರೂ ಬಳಿಕ ಭರ್ಜರಿಯಾಗಿ ಸುರಿಯುತ್ತಿದ್ದು, ಗಾಳಿಯೂ ಜೋರಾಗಿ ಬೀಸುತ್ತಿದೆ. ವರದಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಬನವಾಸಿ ಬಳಿಯ ಅಜ್ಜರಣಿಯ ಸೇತುವೆಯ ಮಟ್ಟಕ್ಕೆ ನೀರು ಹರಿಯುತ್ತಿದೆ. ನೀರಿನ ಮಟ್ಟ ಇನ್ನೂ ಹೆಚ್ಚಾದಲ್ಲಿ ಸೇತುವೆ ಜಲಾವೃತವಾಗಿ ಅಜ್ಜರಣಿ ಭಾಗದ ಜನತೆಗೆ ಸಂಪರ್ಕ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಅಘನಾಶಿನಿ ಮತ್ತು ಬೇಡ್ತಿ ಉಪನದಿಗಳಲ್ಲಿಯೂ ನೀರಿನ ಪ್ರಮಾಣ ಹೆಚ್ಚಿದೆ.

ದಾಂಡೇಲಿಯಲ್ಲಿ ಉತ್ತಮ ಮಳೆ 

ದಾಂಡೇಲಿಯಲ್ಲಿ ಕಳೆದ ವರ್ಷಕ್ಕಿಂತ ಉತ್ತಮ ಮಳೆಯಾಗುತ್ತಿದೆ. ಪ್ರಸಕ್ತ ವರ್ಷ ಜನವರಿಯಿಂದ ಜುಲೈ 12ವರೆಗಿನ ಒಟ್ಟು ಮಳೆ 62.015 ಸೆ.ಮೀ. ದಾಖಲಾಗಿದ್ದು, ಬುಧವಾರ 3.5. ಸೆ.ಮೀ. ಮಳೆಯಾಗಿದೆ. ಗುರುವಾರ ನಸುಕಿನನಿಂದ ಸಂಜೆಯವರೆಗೆ ಸತತವಾಗಿ ಮಳೆ ಬಿಳುತ್ತಿದೆ. ಕಾಗದ ಕಾರ್ಖಾನೆಯ ಆಸ್ಪತ್ರೆ ಎದುರಿನ ಆವರಣದಲ್ಲಿ ಮಾರುತಿ ಕಾರಿನ ಮೇಲೆ ಮರ ಬಿದ್ದು ಹಾನಿ ಉಂಟಾಗಿದೆ.

ಅಲ್ಲಲ್ಲಿ ಚದುರಿದಂತೆ ಮಳೆ

ಕಾರವಾರ:  ಜಿಲ್ಲೆಯಲ್ಲಿ ಅಲ್ಲಲ್ಲಿ ಚದುರಿದಂತೆ ಉತ್ತಮ ಮಳೆಯಾಗುತ್ತಿದೆ. ಕರಾವಳಿಯ ಕೆಲವೆಡೆ ಬಿಸಿಲು ಮೋಡದ ಆಟ ನಡೆದಿದೆ. ಮಲೆನಾಡಿನಲ್ಲಿ ಹದವಾಗಿ ಮಳೆಯಾಗಿದೆ. ಗುರುವಾರ ಬೆಳಗಿನ ವರದಿಯಂತೆ ಜಿಲ್ಲೆಯಲ್ಲಿ ಸರಾಸರಿ 39.6 ಮಿಮೀ ಮಳೆಯಾಗಿದೆ. ಅಂಕೋಲಾದಲ್ಲಿ 36, ಭಟ್ಕಳ-53, ಹಳಿಯಾಳ-16.2, ಹೊನ್ನಾವರ-45.4, ಕಾರವಾರ-25.4, ಕುಮಟಾ-52.6, ಮುಂಡಗೋಡ- 1.8, ಸಿದ್ದಾಪುರ-85.8, ಶಿರಸಿ- 54, ಜೊಯಿಡಾ- 33.6, ಯಲ್ಲಾಪುರದಲ್ಲಿ 31.4 ಮಿಮೀ ಮಳೆಯಾಗಿದೆ.