ಮುಂದುವರಿದ ಮಂಗಗಳ ಸರಣಿ ಸಾವು

ಕಾವ್ರಾಡಿ, ಆರ್ಡಿ ಬಳಿ ಮೂರು ಶವ ಪತ್ತೆ>
ಕುಂದಾಪುರ/ಸಿದ್ದಾಪುರ: ಕಂಡ್ಲೂರು ಕಾವ್ರಾಡಿ ಗ್ರಾಮ ಪಂಚಾಯಿತಿ ಮರಾಶಿ ಬಳಿ ಎರಡು ಹಾಗೂ ಬೆಳ್ವೆ ಗ್ರಾಪಂ ವ್ಯಾಪ್ತಿಯ ಆರ್ಡಿ ಚಿತ್ತೇರಿ ದೇವಳ ಸಮೀಪದ ಕೆರ್ಜಾಡಿ ಎಂಬಲ್ಲಿ ಒಂದು ಮಂಗದ ಮೃತದೇಹ ಶುಕ್ರವಾರ ಪತ್ತೆಯಾಗಿದೆ.

ಶಿರೂರು ಮೇಲ್ಪಂಕ್ತಿಯಲ್ಲಿ ಎರಡು, ಹೊಸಂಗಡಿಯಲ್ಲಿ ಎರಡು, ಸಿದ್ದಾಪುರದಲ್ಲಿ ಒಂದು ಹಾಗೂ ಅಲ್ಪಾಡಿಯಲ್ಲಿ ಒಂದು ಕಾವ್ರಾಡಿಯಲ್ಲಿ ಎರಡು ಸೇರಿ ಒಟ್ಟು 9 ಮಂಗಗಳ ಕಳೇಬರ ಇದುವರೆಗೆ ಕುಂದಾಪುರ ತಾಲೂಕಿನಲ್ಲಿ ಪತ್ತೆಯಾಗಿದೆ. ಇದರಲ್ಲಿ ಆರು ಮಂಗಗಳ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಎರಡು ಮಂಗಗಳ ಕಳೇಬರ ಸುಟ್ಟು ಹಾಕಿರುವ ಮಾಹಿತಿ ಇದೆ.

ಕಾವ್ರಾಡಿ ಘಟನಾ ಸ್ಥಳಕ್ಕೆ ಶುಕ್ರವಾರ ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿ ನಾಗಭೂಷಣ ಉಡುಪ ಹಾಗೂ ಪಶುವೈದ್ಯಾಧಿಕಾರಿ ಭೇಟಿ ನೀಡಿದ್ದು, ಕೊಳೆತ ಮಂಗದ ಶವವನ್ನು ಸುಟ್ಟು ಹಾಕಲಾಗಿದೆ. ಮತ್ತೊಂದು ಮಂಗನ ಶವವನ್ನು ಮರಣೋತ್ತರ ಪರೀಕ್ಷೆಗೆ ಶನಿವಾರ ರವಾನೆ ಮಾಡಲಾಗುತ್ತದೆ.

ಬೆಳ್ವೆ ಗ್ರಾಪಂ ವ್ಯಾಪ್ತಿಯ ಆರ್ಡಿ ಚಿತ್ತೇರಿ ದೇವಳ ಸಮೀಪದ ಕೆರ್ಜಾಡಿಯಲ್ಲಿ ಮಂಗ ಮೃತಪಟ್ಟಿರುವುದನ್ನು ಖಚಿತಪಡಿಸಿ ಮಾಧ್ಯಮ ಪ್ರತಿನಿಧಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪಶು ಚಿಕಿತ್ಸಾಲಯ, ಪ್ರಾಥಮಿಕ ರೋಗ್ಯ ಕೇಂದ್ರ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮರಣೋತ್ತರ ಪರೀಕ್ಷೆ ನಡೆಸಿದರು. ದೇಹ ಭಾಗದ ಮಾದರಿಯನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು.
ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯೆ ಡಾ.ರಾಜೇಶ್ವರಿ ಎ.ಜೆ, ಕೀಟ ತಜ್ಞೆ ಡಾ.ಮುಕ್ತಾ, ತಾಲೂಕು ವೈದ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಬೆಳ್ವೆ ಪಶು ಚಿಕಿತ್ಸಾಲಯ ವೈದ್ಯ ಡಾ.ಸಂತೋಷ, ಬೆಳ್ವೆ ಗ್ರಾಪಂ ಸಿಬ್ಬಂದಿ ಸುರೇಶ ಪೂಜಾರಿ ಬೆಳ್ವೆ, ಅರಣ್ಯ ಇಲಾಖೆ ಅಲ್ಬಾಡಿ ಘಟಕ ವನಪಾಲಕ ರಾವೋತ್ ಬೀರದಾರ್ ಮತ್ತಿತರರಿದ್ದರು.

ಮಣಿಪಾಲದಿಂದ 34 ಮಂದಿ ಡಿಸ್ಚಾರ್ಜ್: ಉಡುಪಿ: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಶಂಕಿತ ಮಂಗನ ಕಾಯಿಲೆ ಸಂಬಂಧಿಸಿದಂತೆ 34 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಆಸುಪಾಸಿನ ಸುಮಾರು 63 ಜನರು ಶಂಕಿತ ಮಂಗನ ಕಾಯಿಲೆ ರೋಗಕ್ಕೆ ಚಿಕಿತ್ಸೆ ಪಡೆಯಲು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದು, ಇದರಲ್ಲಿ 23 ಜನರಿಗೆ ಮಂಗನ ಕಾಯಿಲೆ ದೃಡಪಟ್ಟಿದೆ. ಉಳಿದ 36 ಜನರಿಗೆ ಮಂಗನ ಕಾಯಿಲೆ ಇರದ ಬಗ್ಗೆ ವರದಿಯಾಗಿದ್ದು, 4 ಜನರ ಪರೀಕ್ಷಾ ವರದಿ ಬರಲು ಬಾಕಿ ಇದೆ. 63ರಲ್ಲಿ 39 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, 24 ಜನರು ಚಿಕಿತ್ಸೆ ಪಡೆಯುತಿದ್ದಾರೆ ಎಂದು ಕೆಎಂಸಿ ಆಸ್ಪತ್ರೆ ಅಧಿಕೃತ ಮೂಲಗಳು ತಿಳಿಸಿದೆ.