ಮುಂದುವರಿದ ಒತ್ತುವರಿ ತೆರವು

ಹಾಸನ: ಬಿಎಂ ರಸ್ತೆ ಮಾರ್ಜಿನ್ ಒತ್ತುವರಿ ತೆರವು ಕಾರ್ಯಾಚರಣೆ ಎರಡನೇ ದಿನವಾದ ಶನಿವಾರ ಮುಂದುರಿದಿದ್ದು, ಹಲವು ಕಟ್ಟಡಗಳನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದರು.
ಬೆಳಗ್ಗೆ 8ರಿಂದ ಸಂಜೆ 6ರವರೆಗೆ 4 ಇಟಾಚಿಗಳನ್ನು ಬಳಸಿ, ಕಾರ್ಯಾಚರಣೆ ನಡೆಸಲಾಯಿತು. ಬಿಎಂ ರಸ್ತೆಯಲ್ಲಿರುವ ಮಮತಾ ಹೋಟೆಲ್, ರಕ್ಷಿತ್ ವೈನ್, ಕಾಕ್‌ಟೈಲ್, ಕ್ವಾಲಿಟಿ, ರಶ್ಮಿ, ಪ್ರಭಾತ್ ಹೀಗೆ ಅನೇಕ ಹೋಟೆಲ್‌ಗಳನ್ನು ತೆರವುಗೊಳಿಸಲಾಯಿತು. ಕೆಲವರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಖಾಲಿ ಮಾಡಿದರು.
ಹೈಕೋರ್ಟ್ ತಡೆಯಾಜ್ಞೆ: ಕಟ್ಟಡ ತೆರವು ಕಾರ್ಯಾಚರಣೆ ಪ್ರಶ್ನಿಸಿ ಬಿಗ್ ಬಜಾರ್, ಹೋಟೆಲ್ ಕೃಷ್ಣ, ಫ್ಯಾಷನ್ ಷೋ ರೂಂ ಹೀಗೆ ಇತರ ಕಟ್ಟಡ ಮಾಲೀಕರು ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಆದರೆ ಶನಿವಾರ ಮತ್ತು ಭಾನುವಾರ ಸರ್ಕಾರಿ ರಜೆ ಇರುವುದರಿಂದ ನಗರಸಭೆ ಅಧಿಕಾರಿಗಳು ತಡೆಯಾಜ್ಞೆ ಪ್ರತಿ ಸ್ವೀಕರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಬೇಕಾಯಿತು. ತಡೆಯಾಜ್ಞೆ ಪತ್ರವನ್ನು ಕಟ್ಟಡದ ಗೋಡೆಗೆ ಅಂಟಿಸಿದ್ದರೂ ಅದನ್ನು ಪರಿಗಣಿಸದೆ ಜೆಸಿಬಿಗಳು ಕಾರ್ಯ ನಿರ್ವಹಿಸಿದವು.
ತೆರವಿಗೆ ಬಿಜೆಪಿ ವಿರೋಧ: ಸ್ಥಳೀಯ ಶಾಸಕ ಪ್ರೀತಂ ಜೆ.ಗೌಡ ನಗರದಲ್ಲಿ ಇಲ್ಲದ ವೇಳೆ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಟ್ಟಡ ನಿರ್ಮಾಣ ಆರಂಭದಲ್ಲಿ ಅನುಮತಿ ನೀಡುವವರೂ ನಗರಸಭೆಯವರೇ, ಇದೀಗ ತೆರವು ಮಾಡುತ್ತಿರುವವರು ಅವರೇ. ನಗರಸಭೆ ಆಯುಕ್ತ ಬಿ.ಎ. ಪರಮೇಶ್ ಪಕ್ಷಪಾತ ಮಾಡುತ್ತಿದ್ದು ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಆಗ್ರಹಿಸಿದ್ದಾರೆ.
ಜನರ ಅನುಕೂಲಕ್ಕಾಗಿ ತೆರವು: ಸಂಚಾರ ದಟ್ಟಣೆಯಿಂದ ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿತ್ತು. ಜನರ ಅನುಕೂಲಕ್ಕಾಗಿ ಒತ್ತುವರಿ ತೆರವು ಮಾಡುತ್ತಿದ್ದು, ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣ ಹೇಳಿದರು.
ಶಾಸಕ ಪ್ರೀತಂ ಜೆ. ಗೌಡ ಅವರ ಬೆಂಬಲಿಗರ ಬಾರ್ ತೆರವುಗೊಳಿಸಿದ ಕಾರಣ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ತೆರವು ಕಾರ್ಯಾಚರಣೆಯಲ್ಲಿ ತಲೆ ಹಾಕದ ಸಚಿವ ರೇವಣ್ಣ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ನನ್ನ ಕಟ್ಟಡವನ್ನು ತೆರವುಗೊಳಿಸಿದ್ದಾರೆ. ಒಳ್ಳೆಯ ಉದ್ದೇಶದಿಂದ ನಡೆಯುತ್ತಿರುವ ಕಾಮಗಾರಿಗೆ ಪಕ್ಷಭೇದ ಮರೆತು ಸಹಕಾರ ನೀಡಬೇಕು ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ನಗರದ ಪ್ರತಿ ವಾರ್ಡ್‌ಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಲು ನಿರ್ಧರಿಸಿದ್ದೇನೆ. ನಗರಸಭೆ ನೂತನ ಸದಸ್ಯರ ಸಭೆ ಆಯೋಜಿಸಿ ಆಗಬೇಕಿರುವ ತುರ್ತು ಕಾಮಗಾರಿಗಳ ಮಾಹಿತಿ ಪಡೆಯಲಿದ್ದೇನೆ ಎಂದು ಹೇಳಿದರು.

Leave a Reply

Your email address will not be published. Required fields are marked *