ಅರಕಲಗೂಡು ಕ್ಷೇತ್ರದ ಶಾಸಕ ಎ.ಮಂಜು ಸಲಹೆ
ಸೋಮವಾರಪೇಟೆ: ಸೋಮವಾರಪೇಟೆ ಅರೆಭಾಷೆ ಗೌಡ ಸಮಾಜದ ವಾರ್ಷಿಕ ಸಂತೋಷ ಕೂಟ ಕಾರ್ಯಕ್ರಮ ಸ್ಥಳೀಯ ಸಾಂದೀಪನಿ ಶಾಲಾ ಆವರಣದಲ್ಲಿ ಬುಧವಾರ ನಡೆಯಿತು.
ಕಾರ್ಯಕ್ರಮವನ್ನು ಅರಕಲಗೂಡು ಕ್ಷೇತ್ರದ ಶಾಸಕ ಎ.ಮಂಜು ಉದ್ಘಾಟಿಸಿದರು. ಜೀವನದಲ್ಲಿ ಒಳ್ಳೆಯ ಬದಲಾವಣೆ ವಿದ್ಯೆಯಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗಬೇಕು. ಮಕ್ಕಳಿಗೆ ಸಂಸ್ಕೃತಿಯನ್ನು ಕಲಿಸುವ ಮೂಲಕ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಅರೆಭಾಷೆ ಗೌಡ ಸಮಾಜದ ಅಭಿವೃದ್ಧಿ, ಕಾರ್ಯ ಚಟುವಟಿಕೆಗಳಿಗೆ ಎಲ್ಲ ರೀತಿಯ ಸಹಕಾರವನ್ನೂ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ದಂಡಿನ ಉತ್ತಯ್ಯ ಅಧ್ಯಕ್ಷತೆ ವಹಿಸಿದ್ದರು. ಮಡಿಕೇರಿ ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಸಾಂದೀಪನಿ ಶಾಲೆಯ ಮುಖ್ಯಸ್ಥ ಮೂಡಗದ್ದೆ ಲಿಖಿತ್ ದಾಮೋದರ್, ಉಪಾಧ್ಯಕ್ಷ ಮುಕ್ಕಾಟಿ ಚಂಗಪ್ಪ, ಖಜಾಂಚಿ ಕುದುಕುಳಿ ಗಜೇಂದ್ರ ಇದ್ದರು. ಸಮಾಜದವರಿಗೆ ವಿವಿಧ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ತರಗತಿಯಲ್ಲಿ ಶೇ.95ಕ್ಕಿಂತ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.