ಮುಂದಿನವಾರ ಅವಕಾಶ ಭರವಸೆ

ಕುಮಟಾ:,ತರಕಾರಿ ಮಾರಾಟಕ್ಕೆ ಸೂಕ್ತ ಜಾಗ ಕಲ್ಪಿಸುವಂತೆ ಆಗ್ರಹಿಸಿ ಗೋಕರ್ಣ ಭಾಗದ ಮಹಿಳೆಯರು ಪಟ್ಟಣದ ಹೊಸ ಸಂತೆಕಟ್ಟೆ ಬಳಿ ಬುಧವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಕರವೇ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದರು.

ಸಂತೆದಿನವಾದ ಬುಧವಾರ ಬೆಳಗ್ಗೆ ತರಕಾರಿ ಮಾರಾಟಕ್ಕೆ ಬಂದ ಮಹಿಳೆಯರು, ‘ಹೊಸ ಸಂತೆ ಕಟ್ಟೆಯಲ್ಲಿ ಅವಕಾಶ ಕೊಡಿ ಅಥವಾ ರಸ್ತೆ ಬದಿಯಲ್ಲೇ ಎಲ್ಲರಿಗೂ ಮಾರಲು ಬಿಡಿ’ ಎಂದು ಪಟ್ಟು ಹಿಡಿದರು.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಎಪಿಎಂಸಿ ಅಧ್ಯಕ್ಷ ರಾಮನಾಥ ಶಾನಭಾಗ ಹಾಗೂ ಗೋಕರ್ಣ ಭಾಗದ ಎಪಿಎಂಸಿ ಸದಸ್ಯ ಮನೋಹರ ಗೌಡ ಮಾತುಕತೆ ನಡೆಸಿದರಾದರೂ ಪ್ರಯೋಜನವಾಗಲಿಲ್ಲ. ಸಂತೆಕಟ್ಟೆಯ 5 ಬ್ಲಾಕ್​ಗಳನ್ನು ಮೀಸಲು ಇಟ್ಟರೂ ಯಾರೊಬ್ಬರೂ ಮಾರಾಟಕ್ಕೆ ಕುಳಿತುಕೊಳ್ಳಲು ಸಿದ್ಧರಾಗಲಿಲ್ಲ.

‘ಸ್ಥಳೀಯ ತರಕಾರಿ ಬೆಳೆಗಾರರು ಹಾಗೂ ಮಾರಾಟಗಾರರಿಗೆ ಆದ್ಯತೆ ನೀಡಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಭಾಸ್ಕರ ಪಟಗಾರ ಹಾಗೂ ಇತರರು ಒತ್ತಾಯಿಸಿದರು.

ಪ್ರತಿಕ್ರಿಯಿಸಿದ ಎಪಿಎಂಸಿ ಉಪಾಧ್ಯಕ್ಷ ಆರ್.ಜಿ.ಹೆಗಡೆ, ಗೋಕರ್ಣ ಭಾಗದ ಮಹಿಳೆಯರಿಗೆ ಮುಂದಿನ ಬುಧವಾರ ಹೊಸ ಸಂತೆಕಟ್ಟೆಯಲ್ಲೇ ಅವಕಾಶ ಮಾಡಿಕೊಡುತ್ತೇವೆ’ ಎಂದು ಭರವಸೆ ನೀಡಿದರು.

ಎಪಿಎಂಸಿ ಅಧ್ಯಕ್ಷ ರಾಮನಾಥ ಶಾನಭಾಗ ಮಾತನಾಡಿ, ‘ಎಲ್ಲರೂ ಸಂತೆಕಟ್ಟೆಯಲ್ಲೇ ತರಕಾರಿ ಮಾರಾಟ ಮಾಡಬೇಕು. ಯಾವುದೇ ಕಾರಣಕ್ಕೂ ರಸ್ತೆ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ. ಸ್ಥಳೀಯ ತರಕಾರಿ ಬೆಳೆಗಾರರು, ಮಾರಾಟಗಾರರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಎಪಿಎಂಸಿ ಆಡಳಿತ ಮಂಡಳಿ ಸ್ಪಂದಿಸಿದೆ. ಮುಂದಿನ ಬುಧವಾರ ಗೋಕರ್ಣ ಭಾಗದ ಮಹಿಳೆಯರೆಲ್ಲರೂ ಸಂತೆಕಟ್ಟೆಯಲ್ಲೇ ಕುಳಿತು ಮಾರಲು ಒಪ್ಪಿದ್ದಾರೆ’’ ಎಂದರು.

ವರದಿಗೆ ಸ್ಪಂದನೆ:ಪುರಸಭೆಯ ಶೌಚಗೃಹವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಯಿತು. ರಸ್ತೆಯಲ್ಲಿ ತರಕಾರಿ ಹಾಗೂ ಇತರ ಸಾಮಗ್ರಿಗಳನ್ನು ಮಾರಾಟ ಮಾಡದಂತೆ ಪಿಎಸ್​ಐ ಇ.ಸಿ. ಸಂಪತ್ ಹಾಗೂ ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರು. ವಾರದಸಂತೆಯ ಸಮಸ್ಯೆ ಕುರಿತು ಎರಡು ದಿನಗಳಿಂದ ವಿಜಯವಾಣಿಯಲ್ಲಿ ವಿಸõತ ವರದಿ ಪ್ರಕಟಿಸಲಾಗಿತ್ತು.