ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ

ಕೋಲಾರ: ಜಿಲ್ಲೆಯಲ್ಲಿ ಕಳೆದ ಮುಂಗಾರು ಹಂಗಾಮು ವೈಫಲ್ಯದಿಂದ ಬೆಳೆ ನಷ್ಟಕ್ಕೀಡಾಗಿರುವ ರೈತರ ಪೈಕಿ ಮೊದಲ ಹಂತದಲ್ಲಿ 11,524 ಮಂದಿಗೆ 1.29 ಕೋಟಿ ರೂ. ಪರಿಹಾರ ವಿತರಿಸಲಾಗಿದ್ದು, ಉಳಿದವರಿಗೆ 2ನೇ ಹಂತದಲ್ಲಿ ಹಣ ಪಾವತಿಸುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.

ಮುಂಗಾರು ಹಂಗಾಮಿಗೆ 1.02 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಗೆ 1723 ಗ್ರಾಮಗಳಲ್ಲಿ 71063 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಮಳೆ ಅಭಾವದಿಂದ 52320 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಒಣಗಿದ್ದು, ಈ ಪೈಕಿ ರಾಗಿ 32024 ಹೆಕ್ಟೇರ್, ತೊಗರಿ 450 ಹೆಕ್ಟೇರ್, ನೆಲಗಡಲೆ 6950 ಹೆಕ್ಟೇರ್ ಇತರ ಬೆಳೆಗಳು 14 ಹೆಕ್ಟೇರ್ ಸೇರಿ ಒಟ್ಟಾರೆ 38438 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಶೇ.33ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿತ್ತು.

ಇದರನ್ವಯ ಜಿಲ್ಲೆಯಲ್ಲಿ 1174 ಗ್ರಾಮಗಳಲ್ಲಿ ರಾಗಿ, 38 ಗ್ರಾಮಗಳಲ್ಲಿ ನೆಲಗಡಲೆ, 504 ಗ್ರಾಮದಲ್ಲಿ ರಾಗಿ ಮತ್ತು ತೊಗರಿ ಹಾಗೂ 3 ಗ್ರಾಮಗಳಲ್ಲಿ ರಾಗಿ, ತೊಗರಿ ಹಾಗೂ ನೆಲಗಡಲೆ ಬೆಳೆಯನ್ನು ಸಮೀಕ್ಷೆಗೆ ಆಯ್ಕೆ ಮಾಡಲಾಗಿತ್ತು.

ಬೆಳೆ ಹಾನಿ ಸಂಬಂಧ ನಿಖರ ಹಾಗೂ ಸ್ಪಷ್ಟ ಮಾಹಿತಿ ಸಂಗ್ರಹಿಸಲು ಮೊಬೈಲ್ ಆಪ್ ಬಳಸಿ ಸುಮಾರು ಒಂದು ತಿಂಗಳು ಹೆಚ್ಚು ಪ್ರತಿ ಜಮೀನಿಗೆ ತೆರಳಿ ಬೆಳೆ ಹಾನಿ ಕುರಿತ ಭಾವಚಿತ್ರ ತೆಗೆದು ಸರ್ವೆ ನಂಬರ್​ಗಳೊಂದಿಗೆ ಮಾಹಿತಿ ಕಲೆ ಹಾಕಲಾಗಿದೆ. ಕೆಲವೆಡೆ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಸಿಬ್ಬಂದಿಯಿಂದ ಲೋಪಗಳಾದ ಹಿನ್ನೆಲೆಯಲ್ಲಿ ಅಂತಹ ಕಡೆ ಮರು ಸಮೀಕ್ಷೆ ನಡೆಸಲಾಗಿತ್ತು.

ಆಯ್ಕೆಯಾದ ಗ್ರಾಮಗಳಲ್ಲಿ ಮೊದಲ ಹಂತದಲ್ಲಿ 1128 ಗ್ರಾಮಗಳ 93768 ಫಲಾನುಭವಿಗಳನ್ನು ಗುರುತಿಸಲಾಗಿದೆ. ಈ ಪೈಕಿ ಮೊದಲ ಹಂತದಲ್ಲಿ ಇದುವರೆಗೆ 11,524 ರೈತರಿಗೆ ಹೆಕ್ಟೇರ್​ಗೆ 6800 ರೂ.ನಂತೆ ಒಟ್ಟು 1.29 ಕೋಟಿ ರೂ.ಗಳನ್ನು ಖಾತೆಗಳಿಗೆ ಜಮಾ ಮಾಡಲಾಗಿದೆ. ಉಳಿದ ರೈತರ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಪರಿಶೀಲನೆ ನಡೆಯುತ್ತಿದೆ. 2ನೇ ಹಂತದಲ್ಲಿ 719 ಗ್ರಾಮಗಳ 63,.145 ರೈತರಿಗೆ ಬೆಳೆ ನಷ್ಟ ಪರಿಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಲಿದೆ.

ಮುಂಗಾರು ಹಂಗಾಮಿನಲ್ಲಿ 1.29 ಕೋಟಿ ರೂ. ಬೆಳೆ ನಷ್ಟ ಪರಿಹಾರ ವಿತರಿಸಲಾಗಿದೆ. 2ನೇ ಹಂತದಲ್ಲಿ 719 ಗ್ರಾಮಗಳಲ್ಲಿ 63145 ಫಲಾನುಭವಿಗಳಿಗೆ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭಿಸಲಾಗುವುದು. ಸಮೀಕ್ಷೆಗೂ ಮೊದಲೇ ಕೆಲ ಬೆಳೆಗಳು ಕಟಾವು ಮಾಡಿರುವ ಪ್ರಕರಣಗಳಲ್ಲೂ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು.

| ಜೆ.ಮಂಜುನಾಥ್ ಜಿಲ್ಲಾಧಿಕಾರಿ, ಕೋಲಾರ