ಮುಂಗಾರು ಹಂಗಾಮಿಗೆ ರೈತರ ಸಿದ್ಧತೆ

ಗಜೇಂದ್ರಗಡ: ಸತತ ಬರದಿಂದ ಬಸವಳಿದ ರೈತರು ಮುಂಗಾರು ಮಳೆಯ ಆಸೆಯೊಂದಿಗೆ ಹೊಲಗಳಿಗೆ ಗೊಬ್ಬರ ಹಾಕಿ ಹರಗುತ್ತಿದ್ದಾರೆ. ಒಮ್ಮೆ ಮಳೆಯಾದರೆ ಭೂಮಿಯನ್ನು ಮತ್ತಷ್ಟು ಹದಗೊಳಿಸಬಹುದು ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

25 ದಿನಗಳ ಹಿಂದೆ ತಾಲೂಕಿನ ಕೆಲವೆಡೆ ಮಳೆ ಬಂದು ಸಮಾಧಾನ ಮೂಡಿಸಿತ್ತು. ಬಳಿಕ ಏರುತ್ತಿರುವ ಬಿಸಿಲಿನ ತಾಪಕ್ಕೆ ಭೂಮಿಯ ತೇವಾಂಶ ಒಣಗಿ ಹೋಗಿದ್ದು ನೆಲ ಬಿರುಸಾಗುತ್ತಾ ಸಾಗಿದೆ.

ತಾಲೂಕಿನಲ್ಲಿ 93,000 ಹೆಕ್ಟೇರ್ ಪ್ರದೇಶ ಸಾಗುವಳಿ ಜಮೀನನ್ನು ಹೊಂದಿದೆ. ಕೊಳವೆ ಬಾವಿ ಆಶ್ರಿತ 12 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಭೂಮಿ ಇದ್ದು, ಅಂತರ್ಜಲ ಕೊರತೆಯಿಂದ ಬತ್ತುತ್ತಿವೆ. ಇದರಿಂದ ತೋಟಗಾರಿಕೆ ಕ್ಷೇತ್ರವೂ ಕಡಿಮೆಯಾಗುತ್ತಿದೆ. ಮುಂಗಾರು ಪೂರ್ವದಲ್ಲಿ ಒಂದು ದೊಡ್ಡ ಮಳೆಯಾದರೆ ಒಣ ಬೇಸಾಯದ ಪ್ರದೇಶದ ರೈತರು ಹೊಲವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಅನುಕೂಲವಾಗುತ್ತದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೆ ಇರುವುದರಿಂದ ಮುಂಗಾರು ಮಳೆ ಬರುವಿಕೆಗಾಗಿ ಕಾದು ಕುಳಿತಿದ್ದಾರೆ. ಜೂನ್ 1ರ ನಂತರ ತಾಲೂಕಿಗೆ ಮುಂಗಾರು ಮಳೆ ಕಾಲಿಡುವ ಸೂಚನೆ ಇದ್ದು, ಉತ್ತಮ ಮಳೆಯಾದರೆ ರೈತರಲ್ಲಿ ಸಂತಸ ಮೂಡಲಿದೆ.

ಸೂಡಿ, ಇಟಗಿ, ಬೇವಿನಕಟ್ಟಿ, ರಾಜೂರ, ರಾಮಾಪುರ, ಚಿಲಝುರಿ ಭಾಗದ ಭಾಗಶಃ ಮಳೆಯನ್ನೇ ಅವಲಂಬಿಸಿರುವ ಒಣ ಬೇಸಾಯದ ಭೂಮಿಯಾಗಿದ್ದು, ಮಳೆ ಬಂದರೆ ಮಾತ್ರ ಕೃಷಿಕರಿಗೆ ಅನುಕೂಲವಾಗಲಿದೆ.

ಮುಂಗಾರು ಹಂಗಾಮಿನಲ್ಲಿ ಹೆಚ್ಚಾಗಿ ಹೆಸರು, ಉದ್ದು, ಸೂರ್ಯಕಾಂತಿ, ಸಜ್ಜೆ, ಹೈಬ್ರಿಡ್ ಜೋಳ, ಶೇಂಗಾ ಬಿತ್ತನೆ ಮಾಡಲಾಗುತ್ತದೆ. ಅದಕ್ಕಾಗಿ ರೈತರು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ಗೊಬ್ಬರ ವಿತರಣೆಗೆ ಮಾಡಲಾಗುತ್ತದೆ. ಅಲ್ಲದೆ, ಅಗತ್ಯಕ್ಕೆ ತಕ್ಕಷ್ಟು ರಸಗೊಬ್ಬರಗಳ ದಾಸ್ತಾನು ಇದ್ದು, ರೈತರು ಭಯಪಡುವ ಅಗತ್ಯ ಇಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಗಾರು ಹಂಗಾಮಿಗೆ ರೈತರಿಗೆ ತೊಂದರೆಯಾಗದಂತೆ ಕೃಷಿ ಇಲಾಖೆ ಸಜ್ಜುಗೊಂಡಿದೆ. ಬೀಜ, ಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ. ಅಗತ್ಯಕ್ಕೆ ತಕ್ಕಷ್ಟು ಗೊಬ್ಬರ ದಾಸ್ತಾನು ಮಾಡಲಾಗಿದೆ. 
| ಕೆ.ಎಚ್. ಗಂಗೂರ, ಪಿ.ಮ್ಯಾಗೇರಿ, ಕೃಷಿ ಅಧಿಕಾರಿಗಳು

Leave a Reply

Your email address will not be published. Required fields are marked *