ಕೊಪ್ಪಳ: ಮುಂಗಾರು ಹಂಗಾಮಿನ ಬೆಳೆಗೆ ತುಂಗಭದ್ರಾ ಜಲಾಶಯದಿಂದ ನವೆಂಬರ್ 30ವರೆಗೆ ನೀರು ಹರಿಸಲಾಗುವುದು ಎಂದು ಐಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ತಿಳಿಸಿದರು.
ತಾಲೂಕಿನ ಮುನಿರಾಬಾದ್ ಕಾಡಾ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ 119ನೇ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಮಾಹಿತಿ ನೀಡಿದರು.
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಆ.3ರಿಂದ ನವೆಂಬರ್ 30 ವರೆಗೆ 4100 ಕ್ಯೂಸೆಕ್, ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಆ.3ರಿಂದ ನವೆಂಬರ್ 30 ವರೆಗೆ 1300 ಕ್ಯೂಸೆಕ್, ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ಆ.3ರಿಂದ ನವೆಂಬರ್ 30ವರೆಗೆ 850 ಕ್ಯೂಸೆಕ್, ರಾಯ, ಬಸವ ಕಾಲುವೆಗೆ ಜೂ.1ರಿಂದ ನವೆಂಬರ್ 30 ವರೆಗೆ 270 ಕ್ಯೂಸೆಕ್ ಮತ್ತು ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಆ.3ರಿಂದ ನವೆಂಬರ್ 30ವರೆಗೆ 25 ಕ್ಯೂಸೆಕ್ ನೀರು ಹರಿಸಲಾಗುವುದು. ಮುಂದೆ ನಿಂತ ಬೆಳೆಗೆ ನೀರಿನ ಲಭ್ಯತೆ ಆಧರಿಸಿ ನೀರು ಹರಿಸುವುದಾಗಿ ತಿಳಿಸಿದರು.
ತುಂಗಭದ್ರಾ ಜಲಾಶಯದಲ್ಲಿ ಸದ್ಯ 88 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಇದರಲ್ಲಿ 65 ಟಿಎಂಸಿ ಅಡಿ ನೀರು ರಾಜ್ಯದ ಪಾಲಾಗಿದೆ. ಈಗಾಗಲೇ 10 ಟಿಎಂಸಿ ನೀರು ಬಳಕೆ ಮಾಡಿದ್ದು, ಆಂಧ್ರಕ್ಕೆ 3 ಟಿಎಂಸಿ ಅಡಿ ನೀರು ಹರಿಸಲಾಗಿದೆ. ಕಾರ್ಖಾನೆಗಳಿಗೆ ನೀರು ಹಂಚಿಕೆ ಹಾಗೂ ಗುತ್ತಿಗೆ ನೌಕರರ ಬಾಕಿ ವೇತನ ಪಾವತಿ ಸಂಬಂಧ ಆ.19ರಂದು ಬೆಂಗಳೂರಿನಲ್ಲಿ ಜಲಸಂಲನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಇಲಾಖೆ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು.
ಕಲಬುರ್ಗಿ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಾಳೆ ಸಭೆ ನಡೆಸಿ ನೀರು ಕಳ್ಳತನ ಸೇರಿ ಇತರ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಸೂಚಿಸಲಾಗಿದೆ ಎಂದರು.