ಮುಂಗಾರು ಬಿತ್ತನೆಗೆ ಹಿನ್ನಡೆ

ಲಕ್ಷ್ಮೇಶ್ವರ: ಮುಂಗಾರು ಪೂರ್ವದ ಮಳೆ ಸಕಾಲಿಕವಾಗಿ ಸುರಿದಿದ್ದರೆ ಮೃಗಶಿರ ಮಳೆ ವೇಳೆಗೆ ಭೂಮಿ ಹಸಿರಿನಿಂದ ಕಂಗೊಳಿಸುತ್ತಿತ್ತು. ಆದರೆ, ಜೂನ್ 2 ವಾರ ಕಳೆದರೂ ಮಳೆ ಬಾರದ್ದರಿಂದ ಮುಂಗಾರಿನ ಬಿತ್ತನೆಗೆ ಹಿನ್ನಡೆಯಾಗಿದೆ.

ತಾಲೂಕಿನ ಹಲವು ಕಡೆ ಮಸಾರಿ (ಕೆಂಪು ಮಣ್ಣಿನ) ಜಮೀನುಗಳಲ್ಲಿ ಅಲ್ಪಪ್ರಮಾಣದಲ್ಲಿ ಬಿತ್ತನೆ ಮಾಡಿರುವ ಹೆಸರು, ಹತ್ತಿ, ಜೋಳದ ನಾಟಿಗಳು ಮೇಲೇಳದ ಸ್ಥಿತಿಯಲ್ಲಿವೆ. ತಾಲೂಕಿನಲ್ಲಿ ಸುಮಾರು 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿಟಿ ಹತ್ತಿ ಬಿತ್ತನೆಯ ಗುರಿ ಹೊಂದಲಾಗಿದೆ. ಆದರೆ, ಇದುವರೆಗೂ ನೀರಾವರಿ ಸಹಿತ ಕೇವಲ 3,500 ಹೆಕ್ಟೇರ್ ಬಿತ್ತನೆಯಾಗಿರುವುದು ಮುಂಗಾರಿನ ಹಿನ್ನಡೆಗೆ ಸಾಕ್ಷಿಯಾಗಿದೆ. ಜೂನ್​ನಲ್ಲಿ ವಾಡಿಕೆ ಮಳೆ 93 ಮಿಮೀ ನಷ್ಟಿದ್ದು, ಇದುವರೆಗೂ ಕೇವಲ 19 ಮಿಮೀ ಮಳೆಯಾಗಿದೆ.

ಮಳೆಯ ನಿರೀಕ್ಷೆಯಲ್ಲಿ ಲಕ್ಷ್ಮೇಶ್ವರ ಸೇರಿ ತಾಲೂಕಿನ ಅಡರಕಟ್ಟಿ, ಹರದಗಟ್ಟಿ, ದೊಡ್ಡೂರ, ಸೂರಣಗಿ, ಬಾಲೇಹೊಸೂರ, ಹುಲ್ಲೂರ, ಉಂಡೇನಹಳ್ಳಿ, ಶಿಗ್ಲಿ, ಶಾಬಳಾ ಮತ್ತಿತರರ ಭಾಗದ ರೈತರು ಒಣ ಭೂಮಿಯಲ್ಲಿಯೇ ಹತ್ತಿ ಬಿತ್ತನೆ ಮಾಡಿದ್ದಾರೆ. ಆದರೆ, ರೈತರ ನಿರೀಕ್ಷೆ ಹುಸಿಯಾಗಿ ಮಳೆ ಬಾರದ್ದರಿಂದ ದುಬಾರಿ ಬೆಲೆಯ ಬೀಜಗಳು ಭೂಮಿಯಲ್ಲಿಯೇ ಹಾಳಾಗುವ ಸ್ಥಿತಿ ನಿರ್ವಣವಾಗಿದೆ. ಇದರಿಂದಾಗಿ ರೈತರು ಹೇಗಾದರೂ ಸರಿ ಬಿತ್ತಿದ ಬೀಜಗಳು ಮೊಳಕೆಯೊಡಿಸಲು ಸಾಲುಗುಂಟ ಟ್ಯಾಂಕರ್ ನೀರು ತಂದು ಹಾಕುವ ಸ್ಥಿತಿಯಲ್ಲಿದ್ದಾರೆ. ಅಡರಕಟ್ಟಿ ಗ್ರಾಮದ ರೈತ ಮುದಿಯಪ್ಪ ಹವಳದ ತಮ್ಮ 4 ಎಕರೆ ಜಮೀನಿನಲ್ಲಿ ಬಿಟಿ ಹತ್ತಿ ಬಿತ್ತನೆ ಮಾಡಿದ್ದಾರೆ. ಮಳೆಯಾಗದ್ದರಿಂದ ಬೀಜ ಮೊಳಕೆಯೊಡೆದು ಸಸಿಯಾಗಲು ಟ್ಯಾಂಕರ್ ನೀರು ತರಿಸಿ ಬೀಜ ಹಾಕಿದ ಸ್ಥಳಕ್ಕೆ ನೀರು ಹಾಕುತ್ತಿದ್ದಾರೆ. ಈಗಾಗಲೇ ಬೀಜ, ಆಳು ಸೇರಿ 10 ಸಾವಿರ ರೂ.ಗಳಿಗೂ ಹೆಚ್ಚು ಖರ್ಚು ಮಾಡಿದ್ದಾರೆ. ಅಲ್ಲದೆ, ಈಗ ಪ್ರತಿ ಟ್ಯಾಂಕರ್ ನೀರಿಗೆ 600 ರೂ. ದಂತೆ ಖರೀದಿಸಿ ಬೀಜಗಳಿಗೆ ನೀರುಣಿಸುತ್ತಿದ್ದಾರೆ.