ಮೀಸಲು ಅರಣ್ಯದಲ್ಲಿ ಟೆಂಟ್ ನಿರ್ಮಾಣಕ್ಕೆ ತಡೆ

ಕೆ.ಆರ್.ಪೇಟೆ: ಗೊರೂರು ಡ್ಯಾಂ ನಿರ್ಮಾಣದಲ್ಲಿ ಜಮೀನು ವಂಚಿತ ಹಾಸನ ರೈತರು ತಾಲೂಕಿನ ಬಿಬಿ ಕಾವಲು ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ಗುರುವಾರ ಟೆಂಟ್ ಹಾಕಲು ಮುಂದಾದ ವೇಳೆ ಅರಣ್ಯಾಧಿಕಾರಿಗಳು ತಡೆದಿದ್ದಾರೆ.

ಡ್ಯಾಂ ನಿರ್ಮಾಣಕ್ಕೆಂದು ಜಮೀನು ಕೊಟ್ಟಿದ್ದ ರೈತರಿಗೆಂದು ಬಿಬಿ ಕಾವಲ್‌ನಲ್ಲಿ ಸರ್ಕಾರ ಜಮೀನು ನೀಡಿದೆ. ಆದರೆ, ಅರಣ್ಯ ಇಲಾಖೆ ರೈತರಿಗೆ ಜಮೀನನ್ನು ಸ್ವಾಧೀನಕ್ಕೆ ಬಿಟ್ಟುಕೊಡದ ಹಿನ್ನೆಲೆಯಲ್ಲಿ ದಿಢೀರ್ ಟೆಂಟ್ ಹಾಕಲು ಮುಂದಾಗಿದ್ದಾರೆ. ವಿಷಯ ತಿಳಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬೈರಾರೆಡ್ಡಿ, ಅರಣ್ಯವಲಯ ಅರಣ್ಯಾಧಿಕಾರಿ ಮಧುಸೂಧನ್, ಉಪವಲಯ ಅರಣ್ಯಾಧಿಕಾರಿ ರಾಘವೇಂದ್ರ ಟೆಂಟ್ ಹಾಕುವುದನ್ನು ತಡೆದಿದ್ದಾರೆ.

ಈ ವೇಳೆ ಮಾತನಾಡಿದ ಅರಣ್ಯಾಧಿಕಾರಿ ಮಧುಸೂಧನ್, ಡಿಸಿ ಅವರು ಜಮೀನು ಅಳತೆ ಮಾಡಲು ಈ ಹಿಂದೆ ಸೂಚಿಸಿದ್ದರು. ಅದರಂತೆ ಅಳತೆ ಮಾಡಿ ಡಿಸಿ ಅವರಿಗೆ ವರದಿ ಸಲ್ಲಿಸಲು ಅವಕಾಶ ಮಾಡಿಕೊಡಿ, ಬಳಿಕ ಅವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಮನವೊಲಿಸಿದ್ದಾರೆ. ಆದರೆ, ಇದಕ್ಕೆ ರೈತರು ಒಪ್ಪಿಲ್ಲ. ಜತೆಗೆ ಪ್ರತಿಭಟನೆ ಮುಂದುವರಿಸಿದ್ದಾರೆ. ಈ ಹಿನ್ನೆಲೆ ಎಎಸ್‌ಐ ಈರೇಗೌಡ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ರೈತ ಭೈರಾಪುರ ಮಂಜೇಗೌಡ ಮಾತನಾಡಿ, ಕಂದಾಯ ಇಲಾಖೆ ಜಾಗ ಕೊಟ್ಟಿದೆ. ಅರಣ್ಯ ಇಲಾಖೆಯವರು ರೈತರಿಗೆ ಬಿಟ್ಟು ಕೊಟ್ಟಿಲ್ಲ. ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದರು, ನ್ಯಾಯಾಲಯ ಕೂಡ ನಮ್ಮ ಪರ ಆದೇಶ ಮಾಡಿದ್ದಾರೆ. ಆದರೆ, ಮತ್ತೆ ತಕರಾರು ಮಾಡುತ್ತಿದ್ದಾರೆ. ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಬೇಡಿ ಎಂದು ಹೇಳಿದರು.

ಸಹಾಯಕ ಅರಣ್ಯಾ ಸಂರಕ್ಷಣಾಧಿಕಾರಿ ಬೈರಾರೆಡ್ಡಿ ಮಾತನಾಡಿ, ರೈತರನ್ನು ಒಕ್ಕಲೆಬ್ಬಿಸುತ್ತಿಲ್ಲ. ಸರ್ಕಾರ ಅರಣ್ಯ ಪ್ರದೇಶ ಎಂದು ಹಸ್ತಾಂತರಿಸಿದೆ. ಅದರಂತೆ ಅರಣ್ಯಾಭಿವೃದ್ಧಿ ಮಾಡಲಾಗಿದೆ. ಆದ್ದರಿಂದ, ಸರ್ವೇ ಮಾಡಿಸಿ ಗುರುತು ಮಾಡಲಿ. ಎಲ್ಲವೂ ಸರಿಹೋಗುತ್ತದೆ ಎಂದರು.