ಮೂಡಲಗಿ, ಬೆಳಗಾವಿ: ಈಗಾಗಲೇ ಮೀಸಲಾತಿ ಸಂಬಂಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, ಈ ಸಮಾಜಗಳ ಮೀಸಲಾತಿ ಬೇಡಿಕೆಗಳಿಗೆ ಸರ್ಕಾರದ ಮಟ್ಟದಲ್ಲಿ ನಾನು ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಪಟ್ಟಣದ ಬಸವಮಂಟಪದಲ್ಲಿ ಕಿತ್ತೂರು ಚನ್ನಮ್ಮ ಯುವಕ ಸಂಘವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯ 2ಎ ಮೀಸಲಾತಿ ಸಂಬಂಧ ಹಲವು ದಿನಗಳಿಂದ ಹೋರಾಟಕ್ಕೆ ಇಳಿದಿದ್ದು, ಅವರಿಗೆ ಎಲ್ಲ ರೀತಿಯ ಸಹಕಾರ ಹಾಗೂ ಬೆಂಬಲ ನೀಡುತ್ತೇನೆ ಎಂದರು.
ಈ ಸಮುದಾಯದ ಜತೆಗೆ ಉಪ್ಪಾರ, ಕುರುಬ ಸಮುದಾಯ ಎಸ್ಸಿ ಅಥವಾ ಎಸ್ಟಿಗೆ ಸೇರ್ಪಡೆ ಮಾಡುವಂತೆ, ಮಾದಿಗ ಸಮುದಾಯ ನ್ಯಾ. ಸದಾಶಿವ ಆಯೋಗದ ಜಾರಿಗಾಗಿ ನಿರಂತರ ಹೋರಾಟ ಮಾಡುತ್ತಿದ್ದಾರೆ. ಈ ಸಮುದಾಯಗಳ ಮೀಸಲಾತಿ ಸಂಬಂಧ ನಡೆಯುತ್ತಿರುವ ಹೋರಾಟಕ್ಕೆ ನಾನು ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ. ನಾವೆಲ್ಲರೂ ಒಗ್ಗಟಿನಿಂದ ಕೂಡಿಕೊಂಡು ಮುಖ್ಯಮಂತ್ರಿಗಳ ಮೇಲೆ ಹಕ್ಕೊತ್ತಾಯ ಮಂಡಿಸೋಣ. ಶೀಘ್ರದಲ್ಲಿಯೇ ಎಲ್ಲ ಜನಪ್ರತಿನಿಧಿಗಳು, ಆಯಾ ಸಮುದಾಯದ ಮುಖಂಡರು ಸೇರಿ ಸಭೆ ನಡೆಸಿ ಬೆಂಗಳೂರಿಗೆ ನಿಯೋಗವನ್ನು ತೆಗೆದುಕೊಂಡು ಹೋಗೊಣ ಎಂದರು.
ಸಾನ್ನಿಧ್ಯವನ್ನು ಸಿದ್ಧಸಂಸ್ಥಾನ ಮಠದ ಪೀಠಾಧಿಪತಿ ಅಮೃತಬೋಧ ಸ್ವಾಮೀಜಿ ವಹಿಸಿದ್ದರು. ನಿರಂಜನ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು.
ಹಿರಿಯ ಸಹಕಾರಿ ಧುರೀಣ ಬಿ.ಆರ್. ಪಾಟೀಲ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಢವಳೇಶ್ವರ, ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಡಿ.ಡಿ. ಪಾಟೀಲ, ಬಸವಪ್ರಭು ನಿಡಗುಂಡಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನಿಲಕಂಠ ಕಪ್ಪಲಗುದ್ದಿ, ಆರ್.ಪಿ. ಸೋಲವಾಲ್ಕರ, ಪುರಸಭೆ ಅಧ್ಯಕ್ಷ ಹನುಮಂತ ಗುಡ್ಲಮನಿ, ಬಿಜೆಪಿ ಅರಬಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಬಸವರಾಜ ಪಾಟೀಲ, ಸುಭಾಷ ಪಾಟೀಲ, ಮಲ್ಲು ಪಾಟೀಲ, ತಿಪ್ಪಣ್ಣ ಕುರಬಗಟ್ಟಿ, ಶಿವನಗೌಡ ಪಾಟೀಲ, ಹನುಮಂತ ತೇರದಾಳ, ರಾಜು ಬೈರಗೋಳ, ಮಲ್ಲಿಕಾರ್ಜುನ ಕಬ್ಬೂರ, ಎಂ.ಎಂ.ಪಾಟೀಲ ಇತರರು ಇದ್ದರು.