ಮೀ ಟೂ ಗ್ರಾಮೀಣಕ್ಕೂ ವಿಸ್ತರಿಸಲಿ

ಶಿರಸಿ:  ಮೀ ಟೂ ಅಭಿಯಾನ ಸುಶಿಕ್ಷಿತ ವರ್ಗಕ್ಕೆ ಸೀಮಿತವಾಗುತ್ತಿದೆ. ಅದರ ಲಾಭ ಗ್ರಾಮೀಣ ಪ್ರದೇಶದ ಸಂತ್ರಸ್ತ ಮಹಿಳೆಯರಿಗೂ ಸಿಗುವಂತಾಗಬೇಕು ಎಂದು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಹೇಳಿದರು.
ನಗರಕ್ಕೆ ಮಂಗಳವಾರ ಆಗಮಿಸಿದ್ದ ಅವರು ‘ವಿಜಯವಾಣಿ’ಯೊಂದಿಗೆ ಮಾತನಾಡಿ,‘ದೌರ್ಜನ್ಯ ನಡೆದಾಗ ಗ್ರಾಮೀಣ ಮಹಿಳೆಯರು ದೂರು ನೀಡಲು ಮುಂದಾಗುತ್ತಿಲ್ಲ. ಮೀ ಟೂ ಅಭಿಯಾನ ಅಣ್ಣಾ ಹಜಾರೆ ಹೋರಾಟದಂತಾಗಬಾರದು, ಮಹಿಳೆಯರ ಮೇಲೆ ದೌರ್ಜನ್ಯ ಸ್ಥಗಿತಗೊಳ್ಳುವವರೆಗೂ ಧ್ವನಿಯಾಗಿ ಮುಂದುವರಿಯಬೇಕು. ನಮ್ಮ ಹೆಣ್ಣು ಮಕ್ಕಳು ಅಂಜುವುದು ಜಾಸ್ತಿಯಾಗಿದ್ದರಿಂದ, ಎಲ್ಲಿ ಮರ್ಯಾದೆ ಹೋಗುವುದೋ ಎಂಬ ಆತಂಕದಲ್ಲಿ ದೌರ್ಜನ್ಯ ಸಹಿಸಿಕೊಳ್ಳುತ್ತಿದ್ದಾರೆ. ತಮಗೆ ನ್ಯಾಯ ಸಿಗುತ್ತದೆ ಎಂಬ ಕಲ್ಪನೆ ಹಳ್ಳಿ ಹೆಣ್ಣು ಮಕ್ಕಳಲ್ಲಿ ಇಲ್ಲ. ಇದನ್ನು ಮೀರಿ ಮಹಿಳೆಯರು ದೂರು ಸಲ್ಲಿಸುವಂತಾದಾಗ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ. ಆದರೆ, ಮೀ ಟೂ ಅಭಿಯಾನದ ದುರ್ಬಳಕೆ ಆಗುವ ಸಾಧ್ಯತೆಯೂ ಇದೆ. ಈ ಬಗೆಗೆ ಎಚ್ಚರ ವಹಿಸಬೇಕು ಎಂದರು.

ನನ್ನ ಅಧ್ಯಕ್ಷೀಯ ಅವಧಿಯಲ್ಲಿ 5300 ಮಹಿಳಾ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಲ್ಲಿ 4800 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದೇವೆ. ದೌರ್ಜನ್ಯದ ಪ್ರಕರಣಗಳು ಮುಚ್ಚಿಹೋಗುವುದನ್ನು ತಪ್ಪಿಸಲು ಪ್ರತಿ ತಾಲೂಕಿಗೆ ಭೇಟಿ ನೀಡುತ್ತಿದ್ದೇನೆ. ಚಿಕ್ಕಮಗಳೂರು ಜಿಲ್ಲೆಯ ಕಾಫಿ ತೋಟಗಳಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಅಧಿಕವಾಗಿವೆ. ಅಲ್ಲಿಯ ಸಂತ್ರಸ್ತೆಯರನ್ನು ಒಂದೆಡೆ ಸೇರಿಸಿ ಕೆಲ ಮಹಿಳೆಯರಿಂದ ದೂರು ಸ್ವೀಕರಿಸಿದ್ದೇವೆ. ಸಾಮಾಜಿಕ ಜಾಲ ತಾಣಗಳಲ್ಲಿ ಬಹು ದೊಡ್ಡ ದೌರ್ಜನ್ಯ, ಮಹಿಳಾ ನಿಂದನೆ ನಡೆಯುತ್ತಿದೆ. ದೌರ್ಜನ್ಯ ಪ್ರಕರಣ ವಿದ್ಯಾವಂತರಲ್ಲಿಯೇ ಜಾಸ್ತಿ ಇದೆ. ಸಾಮಾಜಿಕ ಜಾಲ ತಾಣದ ಮೂಲಕ ಮಕ್ಕಳೂ ಹಾಳಾಗುತ್ತಿದ್ದು, ಮಲಗುವ ಕೋಣೆಗೆ ಸೀಮಿತವಾಗಿದ್ದ ವಿಷಯಗಳೆಲ್ಲ ಅಂಗೈನಲ್ಲಿ ಮಕ್ಕಳು ನೋಡುವಂತಾಗಿದೆ. ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದರು.