ಮೀಸಲಾತಿ ಜಾರಿ ಒಡೆಯರ್ ಕೊಡುಗೆ

ಸಾಗರ: ಎಲ್ಲ ಸಮುದಾಯಗಳು ಸಮಾನತೆ ಸಾಧಿಸಬೇಕೆಂಬ ಉದ್ದೇಶದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಮೀಸಲಾತಿ ಜಾರಿಗೆ ತರುವ ಮೂಲಕ ಹೊಸ ಭಾಷ್ಯ ಬರೆದರು ಎಂದು ತುಮರಿ ಗ್ರಾಪಂ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ಹೇಳಿದರು.

ಸಾಗರದಲ್ಲಿ ಹಮ್ಮಿಕೊಂಡಿದ್ದ ‘ಮೀಸಲಾತಿ-ಒಡೆಯರು ಬೆಳಗಿದ ಹಣತೆ ನೂರರ ನೆನಪು’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಪರಿಶಿಷ್ಟ ಜಾತಿ ಮತ್ತು ವರ್ಗ, ಹಿಂದುಳಿದ ವರ್ಗದ ಜನರಿಗೆ ಔದ್ಯೋಗಿಕ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಕ್ಷೇತ್ರದಲ್ಲಿ ಪ್ರಾಧಾನ್ಯತೆ ನೀಡಲು ನಾಲ್ವಡಿ ಕೃಷ್ಣರಾಜ ಒಡೆಯರ್ ಜಾರಿಗೆ ತಂದ ಮೀಸಲಾತಿ ಬಗ್ಗೆ ಸಾಕಷ್ಟು ವಿವರಣೆ ಇತಿಹಾಸದ ಪುಟದಲ್ಲಿ ನಮಗೆ ಸಿಗದಿರುವುದು ಬೇಸರದ ಸಂಗತಿ ಎಂದರು.

ಪ್ರಸ್ತುತ ಮೀಸಲಾತಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮೀಸಲಾತಿಯಿಂದ ಭೂತಮುಖಿ ಮತ್ತು ಭವಿಷ್ಯಮುಖಿ ಸಾಧ್ಯಾಸಾಧ್ಯತೆಗಳ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುವವರೂ ಇದ್ದಾರೆ. ಮೀಸಲಾತಿ ಜಾರಿಯಿಂದ ಅರ್ಹರಿಗೆ ನ್ಯಾಯ ಸಿಗುತ್ತಿಲ್ಲ ಎನ್ನುವ ಕೂಗಿನ ನಡುವೆಯೂ ಮೀಸಲಾತಿ ಪಡೆದು ಉನ್ನತ ಸ್ಥಾನಮಾನ ಪಡೆದವರು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರಾ ಎನ್ನುವ ಪ್ರಶ್ನೆ ಉದ್ಭವವಾಗುವುದು ಸಹಜ. ಒಡೆಯರ್ ನೂರು ವರ್ಷಗಳ ಹಿಂದೆ ಜಾರಿಗೆ ತಂದ ಮೀಸಲಾತಿ ಕುರಿತು ಸಂಘಸಂಸ್ಥೆಗಳಿಗೆ ಇದ್ದಷ್ಟು ಆಸಕ್ತಿ ಸರ್ಕಾರಕ್ಕಿಲ್ಲ. ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಯುವ ಜನರಲ್ಲಿ ನಿಜವಾದ ಇತಿಹಾಸ ಪ್ರಜ್ಞೆ ಮೂಡಿಸಬೇಕು ಎಂದು ಸಲಹೆ ನೀಡಿದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಿ.ಪರಮೇಶ್ವರ್, ಜಿ.ನಾಗೇಶ್, ಉಮೇಶ್ ಹಿರೆನೆಲ್ಲೂರು, ವಸಂತ ಕುಗ್ವೆ, ಸತ್ಯನಾರಾಯಣ ಖಂಡಿಕಾ, ವಿ.ಟಿ.ಸ್ವಾಮಿ, ಜಿ.ಎಚ್.ಶಿವಯೋಗಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *