ಮೀಸಲಾತಿ ಜನಕ ಕೃಷ್ಣರಾಜ ಒಡೆಯರ್

ರಾಮನಗರ: ಸಾಮಾಜಿಕ ಕಳಕಳಿ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಮೈಗೂಡಿಸಿಕೊಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೇಲ್ವರ್ಗದ ವಿರೋಧದ ನಡುವೆಯೂ ದಲಿತರು ಮತ್ತು ಮಹಿಳೆಯರಿಗೆ ದೇಶದಲ್ಲಿಯೇ ಪ್ರಥಮ ಬಾರಿಗೆ ಮೀಸಲಾತಿ ತಂದರು ಎಂದು ಸಾಹಿತಿ ಹಾಗೂ ಪ್ರಾಧ್ಯಾಪಕ ಡಾ.ಅಣ್ಣಯ್ಯ ತೈಲೂರು ಬಣ್ಣಿಸಿದರು.

ನಗರದ ಸ್ಪೂರ್ತಿ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ 135ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿಯೇ ದೀನ ದಲಿತರ, ಮಹಿಳೆಯರ ಏಳಿಗೆಗಾಗಿ ಶ್ರಮಿಸಿ ಕರ್ನಾಟಕಕ್ಕೆ ಅನನ್ಯ ಕೊಡುಗೆ ನೀಡಿದ ಮಹನೀಯ ಎಂದರು.

1918ರಲ್ಲಿ ಸರ್ಕಾರದ ಮುಖ್ಯ ನ್ಯಾಯಾಧೀಶರಾಗಿದ್ದ ಸರ್ ಲೆಸ್ಲಿ ಮಿಲ್ಲರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಎಲ್ಲ ಸಮುದಾಯದ ಜನರಿಗೆ ಸರ್ಕಾರಿ ಉದ್ಯೋಗದಲ್ಲಿ ಪ್ರಾತಿನಿಧ್ಯ ದೊರಕುವಂತೆ ಅಧ್ಯಯನ ಮಾಡಿ, ವರದಿ ನೀಡಲು ಆದೇಶ ಮಾಡಿದರು. ನಂತರ ಆಯೋಗದ ಶಿಫಾರಸಿನಂತೆ ಬ್ರಾಹ್ಮಣರು, ಆಂಗ್ಲೋ ಇಂಡಿಯನ್​ರನ್ನು ಹೊರತುಪಡಿಸಿ ಉಳಿದ ಜಾತಿಗಳನ್ನು ಹಿಂದುಗಳೆಂದು ಪರಿಗಣಿಸಿ 1921ರಲ್ಲಿ ಪ್ರಥಮ ಬಾರಿಗೆ ಎಲ್ಲ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ನೀಡಲು ಆದೇಶ ಹೊರಡಿಸಿದರು. ಹಾಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಮೀಸಲಾತಿಯ ಜನಕ ಎನ್ನುತ್ತಾರೆ. ಮಿಲ್ಲರ್ ಆಯೋಗ ಜಾರಿಗೆ ಬಂದಿದ್ದರಿಂದ ಮೊಟ್ಟ ಮೊದಲ ಬಾರಿಗೆ ಮೈಸೂರು ಸಂಸ್ಥಾನಕ್ಕೆ ಕಾಂತರಾಜೇ ಅರಸ್ ದಿವಾನರಾಗಲು ಸಾಧ್ಯವಾಯಿತು. ಈ ಕಾಲದಲ್ಲೇ ಒಕ್ಕಲಿಗರ ಸಂಘ, ರೆಡ್ಡಿ ಜನಸಂಘ, ವೀರಶೈವರ ಜಾತಿ ಆಧಾರಿತ ಶಾಲಾ-ಕಾಲೇಜುಗಳು ಆರಂಭವಾದವು. ಸಾಹಿತ್ಯ, ಸಂಗೀತ, ವಾಸ್ತುಶಿಲ್ಪಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ಕೊಟ್ಟು 1915ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆರಂಭಿಸಿದ ಹೆಗ್ಗಳಿಕೆ ಒಡೆಯರ್​ಗೆ ಸಲ್ಲುತ್ತದೆ ಎಂದರು.

ನಾಲ್ವಡಿಯವರು ಜಾರಿ ಮಾಡಿದ ವಿವಿಧ ಯೋಜನೆಗಳು: 1909ರಲ್ಲಿ ದೇವದಾಸಿ ಪದ್ಧತಿ ನಿಷೇಧ, 1910ರಲ್ಲಿ ಬಸವ ಪದ್ಧತಿ ರದ್ದತಿ, 1910ರಲ್ಲಿ ’ಗೆಜ್ಜೆಪೂಜೆ’ ಪದ್ಧತಿ ಸಂಪೂರ್ಣ ನಿಮೂಲನೆ, 1936 ಜುಲೈ 14ರಂದು ವೇಶ್ಯಾವೃತ್ತಿ ತಡೆಗಟ್ಟುವ ಕಾಯ್ದೆ ಜಾರಿ, 1936 ಜುಲೈ 7ರಂದು ವಿಧವೆಯರಿಗೆ ಮರುವಿವಾಹ ಮಾಡಿಕೊಳ್ಳುವ ಕಾಯ್ದೆ ಜಾರಿ, 1936 ಜುಲೈ 7ರಂದು ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿ, 1914ರಲ್ಲಿ ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧ, 1919ರಲ್ಲಿ ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಶಿಕ್ಷಣ ಶುಲ್ಕ ರದ್ಧತಿ, 1927ರಲ್ಲಿ ಸ್ತ್ರೀಯರಿಗೆ ಮತದಾನದ ಹಕ್ಕನ್ನು ಮೊಟ್ಟಮೊದಲ ಬಾರಿಗೆ ಕಲ್ಪಿಸಿಕೊಟ್ಟರು. 1905ರಲ್ಲಿ ಸಹಕಾರಿ ಕಾರ್ವಿುಕ ಪರಿಹಾರ ಕಾಯ್ದೆ ಜಾರಿಗೆ ತಂದರು. 1913ರಲ್ಲಿ ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆ ಜಾರಿ ಮಾಡಿದರು. 1918ರಲ್ಲಿ ಗ್ರಾಪಂಗಳ ಕಾಯ್ದೆ ಜಾರಿಗೆ ತಂದರು ಎಂದು ವಿವರಿಸಿದರು. ಇದಲ್ಲದೆ ತಾಂತ್ರಿಕ ಕಾಲೇಜುಗಳ ಆರಂಭ ಮತ್ತು ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಿದರು ಎಂದು ಡಾ.ಮುನಿರಾಜಪ್ಪ ತಿಳಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಸಿಂ.ಲಿಂ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಲೇಖಕರ ಸಂಘದ ಅಧ್ಯಕ್ಷ ಕೂ.ಗಿ. ಗಿರಿಯಪ್ಪ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಎಚ್.ಪಿ.ನಂಜೇಗೌಡ, ಗೌರವ ಕಾರ್ಯದರ್ಶಿಗಳಾದ ಡಾ.ರವೀಂದ್ರ ಹುಲುವಾಡಿ, ಎಚ್.ಎಸ್.ರೂಪೇಶ್ ಕುಮಾರ್, ಗಾಯಕರಾದ ಚೌ.ಪು.ಸ್ವಾಮಿ, ವಿನಯ್ಕುಮಾರ್, ತಾಲೂಕುಗಳ ಘಟಕಗಳ ಅಧ್ಯಕ್ಷರಾದ ಬಿ.ಟಿ.ದಿನೇಶ್, ಮತ್ತಿಕೆರೆ ಚಲುವರಾಜು, ಕಲ್ಪನಾ ಶಿವಣ್ಣ, ನಿವೃತ್ತ ಪ್ರಾಂಶುಪಾಲ ಎಸ್.ಎಲ್.ವನರಾಜು, ಶಿಕ್ಷಕಿಯರಾದ ಶೈಲಜಾ ಶ್ರೀನಿವಾಸ್, ಸುಮಂಗಲಾ ಸಿದ್ಧರಾಜು, ಉಪನ್ಯಾಸಕ ಚಿಕ್ಕಚನ್ನಯ್ಯ, ಗ್ರಾಪಂ ಸದಸ್ಯ ಯಕ್ಷರಾಜು, ರೈರ ಮುಖಂಡ ಎಂ.ಡಿ.ಶಿವಕುಮಾರ್ ಇತರರಿದ್ದರು.

ಏಷ್ಯಾದ ಮೊದಲ ಜಲವಿದ್ಯುತ್ ಕೇಂದ್ರ: ಒಡೆಯರ್ ಅವರು ಅಧಿಕಾರಾವಧಿಯಲ್ಲಿ ಜಾರಿಗೊಳಿಸಿದ ಗ್ರಾಮ ನೈರ್ಮಲೀಕರಣ, ವೈದ್ಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಕರ್ಯ, ಪ್ರಯಾಣ ಸೌಲಭ್ಯ ಮತ್ತಿತರ ಕ್ಷೇತ್ರಗಳು ಸ್ವಯಂ ಆಡಳಿತ ಸಂಸ್ಥೆಗಳಾಗಿವೆ. 1907ರಲ್ಲಿ ’ವಾಣೀವಿಲಾಸ ಸಾಗರ’ (ಮಾರಿ ಕಣಿವೆ) ಕಟ್ಟಲ್ಪಟ್ಟಿತು. 1911ರಲ್ಲಿ ಆರಂಭವಾದ ಕೃಷ್ಣರಾಜ ಸಾಗರ ಭಾರತದ ಮೊಟ್ಟ ಮೊದಲ ಬೃಹತ್ ಜಲಾಶಯ. 1900ರಲ್ಲಿಯೇ ಶಿವನಸಮುದ್ರದ ಬಳಿ ದೇಶದ ಹಾಗೂ ಏಷ್ಯಾದ ಮೊದಲ ಜಲ ವಿದ್ಯುತ್ ಕೇಂದ್ರ ಸ್ಥಾಪಿಸಿದ ಕೀರ್ತಿ ನಾಲ್ವಡಿಯವರದು. ಇದರ ಫಲಿತಾಂಶವಾಗಿ 1905 ಆಗಸ್ಟ್ 3ರಂದು ಪ್ರಥಮವಾಗಿ ಬೆಂಗಳೂರಿನಲ್ಲಿ ದೀಪಗಳು ಬೆಳಗಿದವು ಎಂದು ಕಾರ್ಯಕ್ರಮ ಉದ್ಘಾಟಿಸಿದ ಇತಿಹಾಸ ಸಂಶೋಧಕ ಡಾ.ಮುನಿರಾಜಪ್ಪ ಹೇಳಿದರು.

Leave a Reply

Your email address will not be published. Required fields are marked *