ಮೀಸಲಾತಿಗೆ ಆದಾಯಮಿತಿ ನಿಗದಿಯಾಗಲಿ

ರಾಮನಗರ‘ ಸಂವಿಧಾನದತ್ತವಾಗಿ ನೀಡಿರುವ ಮೀಸಲಾತಿ ಶೋಷಿತ ವರ್ಗಗಳ ಪಾಲಾಗದೆ ಉಳ್ಳವರ ಪಾಲಾಗುತ್ತಿರುವುದು ಖಂಡನೀಯ. ಇದನ್ನು ತಪ್ಪಿಸಲು ಆದಾಯ ಮೀತಿ ನಿಗದಿಗೊಳಿಸಬೇಕೆಂದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಡಾ. ಚಿ.ನಾ. ರಾಮು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೀಸಲಾತಿ ಬಳಸಿಕೊಂಡು ಉನ್ನತ ಮಟ್ಟಕ್ಕೆ ಏರಿದವರು,

ತಮ್ಮ ಕುಟುಂಬ ಪೋಷಣೆ ಮತ್ತು ಕುಟುಂಬಸ್ಥರಿಗೆ ಭದ್ರತೆ ಕಲ್ಪಿಸಲು ಮೀಸಲಾತಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ತಳಮಟ್ಟದಲ್ಲಿರುವ ದಲಿತರನ್ನು ಮೇಲೆತ್ತುವ ಕೆಲಸ ಆಗುತ್ತಿಲ್ಲ. ಇಂಥ ಶೋಷಿತರನ್ನು ಜಾಗೃತಗೊಳಿಸಲು ‘ಬಲಿತ ದಲಿತರ ತುಳಿತ ನನ್ನ ಜನ ಅನಾಥ’ ಕೃತಿಯನ್ನು ರಚಿಸಿ, ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದ್ದೇನೆ ಎಂದರು.

ಆದಾಯ ಮಿತಿ ನಿಗದಿಗೊಳಿಸದಿದ್ದರೆ ಮೀಸಲಾತಿ ಮತ್ತಷ್ಟು ದುರ್ಬಳಕೆ ಮತ್ತು ದುರ್ಬಲಗೊಂಡು ಅಂಬೇಡ್ಕರ್ ಕಂಡ ಕನಸು ಕನಸಾಗಿಯೆ ಉಳಿಯಲಿದೆ. ಅರ್ಹರಿಗೆ ನ್ಯಾಯ ದೊರಕುತ್ತಿಲ್ಲ. 1850ರಲ್ಲಿ ಸಾಹು ಮಹಾರಾಜ್ ಮತ್ತು ಬರೋಡಾ ಮಹಾರಾಜ್ ಅವರು ಕಂಡಂತಹ ಮೀಸಲಾತಿ ಕನಸು ಈಡೇರಿಲ್ಲ ಎಂದರು.

ಪ್ರತಿ ಹತ್ತು ವರ್ಷಕ್ಕೊಮ್ಮೆ ಮೀಸಲಾತಿ ವಿಮರ್ಶೆಗೆ ಒಳಪಡಬೇಕೆಂಬ ಸಂವಿಧಾನಿಕ ನೀತಿಯನ್ವಯ ಮುಂದಿನ 2020ರ ಜೂನ್ 20ಕ್ಕೆ ಈಗಿರುವ ಮೀಸಲಾತಿ ನಿಯಮ ಕೊನೆಗೊಳ್ಳಲಿದೆ. ಆಗ ಈ ಮೀಸಲಾತಿ ಪರಿಷ್ಕರಣೆಯಾಗಬೇಕು. ಹೊಸ ಮೀಸಲಾತಿಯಲ್ಲಿ ಎಸ್ಸಿ, ಎಸ್ಟಿ ವರ್ಗಕ್ಕೆ ಕಡ್ಡಾಯ ಆದಾಯ ಮಿತಿ ನಿಗದಿ ಮಾಡಬೇಕು. ಈಗಾಗಲೇ ಈ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದು ಜಾರಿಗೊಂಡಲ್ಲಿ ಅರ್ಹ ಬಡವರು ಮತ್ತು ದಲಿತರಿಗೆ ಮೀಸಲಾತಿ ಸೌಲಭ್ಯ ದೊರಕಲಿದೆ. ಇದರಿಂದ ಅವರ ಬಾಳು ಹಸನಾಗಲಿದೆ ಎಂದರು.

ಮೋದಿ ನಿರ್ಧಾರಕ್ಕೆ ಶ್ಲಾಘನೆ : ಮೇಲ್ವರ್ಗದ ಬಡವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶೇ.10ರಷ್ಟು ಮೀಸಲಾತಿ ಕಲ್ಪಿಸಿರುವುದು ಸ್ವಾಗತಾರ್ಹ. ಆದರೆ ಆದಾಯ ಮಿತಿಯನ್ನು 8 ಲಕ್ಷಕ್ಕೆ ನಿಗದಿಪಡಿಸಿರುವುದರಿಂದ ತಿಂಗಳಿಗೆ 65 ಸಾವಿರ ರೂ. ವೇತನ ಪಡೆಯುವ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಆರ್ಥಿಕವಾಗಿ ಹಿಂದುಳಿದವರು ಮತ್ತು ಬಡವರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ ಆದಾಯ ಮಿತಿಯನ್ನು 2 ಲಕ್ಷಕ್ಕೆ ನಿಗದಿಪಡಿಸಬೇಕೆಂದು ಪ್ರಧಾನಿಯವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ ಎಂದರು.

ಸ್ವಜನರಿಂದಲೇ ದಲಿತರ ಶೋಷಣೆ: ನಾನು ರಾಜಕಾರಣದಲ್ಲಿ ಮೀಸಲಾತಿ ಪಡೆದು ಅಧಿಕಾರ ಪಡೆದಲ್ಲಿ ನನ್ನ ಮಕ್ಕಳಿಗೆ ಯಾವುದೆ ಕಾರಣಕ್ಕೂ ಮೀಸಲಾತಿಯ ಸೌಲಭ್ಯಗಳು ಸಿಗಬಾರದು ಎಂದು ಡಾ.ಚಿ.ನಾ.ರಾಮು ಸ್ಪಷ್ಟಪಡಿಸಿದರು. ಇಂದು ಮೀಸಲಾತಿ ಪಡೆದ ದಲಿತರಿಂದಲೆ ದಲಿತರ ಮೇಲೆ ಶೋಷಣೆ ನಡೆಯುತ್ತಿದೆ. ಇದು ನಿಲ್ಲಬೇಕಾದರೆ ಒಮ್ಮೆ ಮೀಸಲಾತಿ ಪಡೆದವರು ಮತ್ತೆ ತಮ್ಮ ಕುಟುಂಬಕ್ಕೆ ಮೀಸಲಾತಿ ಸೌಲಭ್ಯ ಪಡೆದುಕೊಳ್ಳಬಾರದು. ಇದು ಆತ್ಮವಿಮರ್ಶೆಗೆ ಒಳಪಡಬೇಕು. ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮನವಿಯಂತೆ ಗ್ಯಾಸ್ ಸಬ್ಸಿಡಿ ಪಡೆಯುತ್ತಿದ್ದ ನಾಲ್ಕು ಕೋಟಿ ಜನ ಸಬ್ಸಿಡಿ ಕೈಬಿಟ್ಟಿದ್ದಾರೆ ಎಂದರೆ ಮೇಲ್ವರ್ಗದ ದಲಿತರು ಮೀಸಲಾತಿ ಕೈಬಿಡುವುದು ಒಳಿತು. ಇದರಿಂದ ಮುಂದಿನ ಹತ್ತು ವರ್ಷಗಳಲ್ಲಿ ಸಮೃದ್ಧ ಭಾರತ ಮತ್ತು ಸಮಗ್ರ ಭಾರತದ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ಹನುಮಂತಪ್ಪ, ಜಿಲ್ಲಾಧ್ಯಕ್ಷ ಸಿಂಗ್ರಯ್ಯ, ಜಿಲ್ಲಾ ಉಪಾಧ್ಯಕ್ಷ ರಾಜು, ತಾಲೂಕು ಅಧ್ಯಕ್ಷ ಲೋಕೇಶ್, ದಲಿತ ಮುಖಂಡರಾದ ಸದಾನಂದ, ಶಿವಕುಮಾರ್ ಇತರರು ಇದ್ದರು.

 

Leave a Reply

Your email address will not be published. Required fields are marked *