ಮೀನು ಮಾರುಕಟ್ಟೆ ಬಿಡ್ ಮುಂದಕ್ಕೆ

ಭಟ್ಕಳ: ನೂತನ ಮೀನು ಮಾರುಕಟ್ಟೆಯಲ್ಲಿ ಇನ್ನೂ ವ್ಯಾಪಾರ ಆರಂಭವಾಗಿಲ್ಲ. ಈಗಲೇ ಹರಾಜು ಕರೆಯುತ್ತಿರುವುದು ತಪ್ಪು. ಒಂದು ವೇಳೆ ಅಲ್ಲಿ ಮಾರಾಟಾಗಾರರು ಬರದಿದ್ದರೆ ಹಣ ವಸೂಲಿ ಮಾಡುವುದು ಹೇಗೆ ಎಂದು ಗುತ್ತಿಗೆದಾರ ಕೃಷ್ಣಾ ನಾಯ್ಕ ಆಸರಕೇರಿ ಹಾಗೂ ಇತರರು ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆ ಆವರಣದಲ್ಲಿ ಅಧ್ಯಕ್ಷ ಸಾದಿಕ್ ಮಟ್ಟಾ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿದ ವಿವಿಧ ಮಾರ್ಕೆಟ್​ಗಳ ಹರಾಜು ಪ್ರಕ್ರಿಯೆಯಲ್ಲಿ ಅವರು ಮಾತನಾಡಿದರು. ‘ರಸ್ತೆ ಬದಿ ಮೀನು ವ್ಯಾಪಾರಸ್ಥರನ್ನು ಮನವೊಲಿಸಿ ನೂತನ ಮಾರುಕಟ್ಟೆಗೆ ಸ್ಥಳಾಂತರಸಿ. ನಂತರ ಹಳೇ ಮೀನು ಮಾರುಕಟ್ಟೆಯ ವ್ಯಾಪಾರಸ್ಥರೂ ವ್ಯಾಪಾರಕ್ಕೆ ಬರಲಿದ್ದಾರೆ’ ಎಂದು ಹೇಳಿದರು. ಉತ್ತರಿಸಿದ ಮುಖ್ಯಾಧಿಕಾರಿ ದೇವರಾಜ, ‘ಮೀನು ವ್ಯಾಪಾರಿಗಳನ್ನು ನೂತನ ಮಾರುಕಟ್ಟೆಗೆ ಸ್ಥಳಾಂತರಿಸಲು ಈಗಾಗಲೇ ಮನವೊಲಿಕೆ ಯತ್ನ ನಡೆದಿದೆ. ಆದರೆ, ಯಾರು ಬರುತ್ತಿಲ್ಲ’ ಎಂದು ಅಸಾಯಕತೆ ವ್ಯಕ್ತಪಡಿಸಿದರು. ಈ ವೇಳೆ ಗುತ್ತಿಗೆದಾರರು ಹಾಗೂ ಪುರಸಭೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ಮಧ್ಯ ಪ್ರವೇಶಿಸಿದ ಪುರಸಭೆ ಅಧ್ಯಕ್ಷ ಸಾದಿಕ್ ಮಟ್ಟಾ, ‘ಫೆ. 23ರಂದು ನಡೆಯುವ ಪುರಸಭೆ ಸಾಮಾನ್ಯ ಸಭೆಯಲ್ಲಿ ಈ ಹರಾಜು ಪ್ರಕ್ರಿಯೆ ವಿಚಾರ ಕುರಿತು ರ್ಚಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲಿವರೆಗೆ ಮೀನು ಮಾರುಕಟ್ಟೆ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗುವುದು’ ಎಂದರು.

ವಾರದ ಸಂತೆ ಮಾರ್ಕೆಟ್ 4,10,000 ರೂ, ದಿನವಹಿ ನೆಲವಳಿ 4,03,000 ರೂ.ಗೆ ಹರಾಜಾಗಿದೆ. ಮಟನ್ ಸ್ಟಾಲ್​ನ ಒಟ್ಟು 6 ಮಳಿಗೆಯಲ್ಲಿ ಮೊದಲನೇ ಸ್ಟಾಲ್ 2000 ರೂ.ಗೆ, ನಾಲ್ಕನೇ ಸ್ಟಾಲ್ 2250 ರೂ.ಗೆ ಐದನೇ ಸ್ಟಾಲ್ 2250ರೂ.ಗೆ ಹಾಗೂ ಆರನೇ ಸ್ಟಾಲ್ 2250 ರೂ.ಗೆ ಹರಾಜು ನಡೆಯಿತು. 7 ಮಾಂಸದ ಅಂಗಡಿಯಲ್ಲಿ ಮೊದಲನೇ ಅಂಗಡಿ 2600 ರೂ.ಗೆ, ಮೂರನೇ ಅಂಗಡಿ 11,500 ರೂ.ಗೆ, ನಾಲ್ಕನೇ ಅಂಗಡಿ 2000 ರೂ.ಗೆ, ಐದನೇ ಅಂಗಡಿ 2400 ರೂ.ಗೆ ಆರನೇ ಅಂಗಡಿ 2100 ರೂ.ಗೆ ಹಾಗೂ ಏಳನೇ ಅಂಗಡಿ 2500 ರೂ.ಗೆ ಹರಾಜಾಗಿದೆ. ಹರಾಜು ಪಡೆದವರು 2019ರ ಏಪ್ರಿಲ್ 1ರಿಂದ 2020ರ ಮಾರ್ಚ್ 31ವರೆಗೆ ವಹಿವಾಟು ನಡೆಸಬಹುದಾಗಿದೆ. ಪುರಸಭೆ ಉಪಾಧ್ಯಕ್ಷ ಮೊಹಿದ್ದಿನ್ ಮಹ್ಮದ್ ಅಷ್ಪಾಕ್ ಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷ ಕೈಸರ್ ಅಹ್ಮದ್, ಸದಸ್ಯರಾದ ವೆಂಕಟೇಶ ನಾಯ್ಕ, ಕೃಷ್ಣಾನಂದ ಪೈ ಸದಸ್ಯರು ಇತರರು ಉಪಸ್ಥಿತರಿದ್ದರು.