ಮೀನುಗಾರರ ಸುರಕ್ಷತೆಗಾಗಿ ವಿಶೇಷ ಪೂಜೆ

ಭಟ್ಕಳ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ 7ಮಂದಿ ಮೀನುಗಾರರ ಸುಳಿವು ದೊರಕಿ, ಕ್ಷೇಮವಾಗಿ ಮರಳಲಿ ಎಂದು ಪ್ರಾರ್ಥಿಸಿ ಬೈಲೂರು ಭಾಗದ ಮೀನುಗಾರರು ಇಲ್ಲಿನ ಮೂರು ದೇವಸ್ಥಾನಗಳಿಗೆ ತೆರಳಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು.

ಬೈಲೂರಿನ ಮಡಿಕೇರಿಯ ಲಕ್ಷ್ಮೀ ನರಸಿಂಹ ದೇವಸ್ಥಾನ, ಬೆದ್ರಕೇರಿಯ ಅರಾಮದೇವಿ ಹಾಗೂ ಕೊಪ್ಪದಮಕ್ಕಿ ಗ್ರಾಮದೇವರಾದ ದುರ್ಗಾದೇವಿ ದೇವಸ್ಥಾನಕ್ಕೆ 20ಕ್ಕೂ ಅಧಿಕ ಮೀನುಗಾರರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟ್ರೋಲ್ ಬೋಟ್ ಚಾಲಕರು ಕೆಲಸ ಮಾಡುತ್ತಿದ್ದಾರೆ. ನಾಪತ್ತೆಯಾದ ಬೋಟ್ ಚಾಲಕರು ಹಾಗೂ ಮಾಲೀಕರ ಪತ್ತೆಗೆ ದೇವರಲ್ಲಿ ಸಂಕಲ್ಪ ಮಾಡಲಾಯಿತು.

ಸರ್ಕಾರಗಳ ಮೇಲೆ ಒತ್ತಡ ಹೇರಲು ಜ. 6ರಂದು ಉಡುಪಿ ಮಲ್ಪೆಯಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಬೈಲೂರು ಒಕ್ಕೂಟದ ಎಲ್ಲ ಮೀನುಗಾರರು, ಬೋಟ್ ಚಾಲಕರು, ಮಾಲೀಕರು ಭಾಗವಹಿಸಿ ನಾಪತ್ತೆಯಾದ ಮೀನುಗಾರರ ಪತ್ತೆಗೆ ನಮ್ಮ ಬೆಂಬಲ ಸೂಚಿಸಲಿದ್ದೇವೆ ಎಂದು ಈ ಭಾಗದ ಮೀನುಗಾರರು ತಿಳಿಸಿದರು.

ವಾಸುದೇವ ಮೊಗೇರ, ನಾಗೇಶ ಮಂಜುನಾಥ ಮೊಗೇರ, ಬಾಬು ಶಾಂತಾರಾಂ ಮೊಗೇರ, ಗಣಪತಿ ಪಣ್ತ ಮೊಗೇರ, ಲಕ್ಷ್ಮಣ ಪದ್ಮಯ್ಯ ವೈದ್ಯ ಸೇರಿ ಮೊದಲಾದವರು ಇದ್ದರು.