ಮೀನುಗಾರರ ಪತ್ತೆಗೆ ಉಪಗ್ರಹ ಮೊರೆ

ಕುಮಟಾ/ಭಟ್ಕಳ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ 7 ಮೀನುಗಾರರನ್ನು ಉಪಗ್ರಹ ಮೂಲಕ ಪತ್ತೆ ಹಚ್ಚಲು ಇಸ್ರೋ ಹಾಗೂ ಗೂಗಲ್ ಸಂಸ್ಥೆಗೂ ಮನವಿ ಮಾಡಲಾಗಿದೆ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.

ಸ್ವರ್ಣ ತ್ರಿಭುಜ್ ಎಂಬ ಬೋಟ್​ನಲ್ಲಿ ಡಿ.13ರಂದು ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಜಿಲ್ಲೆಯ ಕುಮಟಾ, ಹೊನ್ನಾವರ ಹಾಗೂ ಭಟ್ಕಳದ ಮೀನುಗಾರರ ಕುಟುಂಬದವರನ್ನು ಬುಧವಾರ ಭೇಟಿ ಮಾಡಿ ಸಾಂತ್ವನ ಹೇಳಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಮೀನುಗಾರರು ಗುಜರಾತ್ ಗಡಿದಾಟಿ ಪಾಕಿಸ್ತಾನ ಗಡಿ ಪ್ರವೇಶಿಸುವ ಸಾಧ್ಯತೆ ಕಡಿಮೆ. ಬೋಟ್​ನಲ್ಲಿ ಅಷ್ಟು ಪ್ರಮಾಣದ ಇಂಧನ ಇರಲಿಲ್ಲ ಎಂದು ಹೇಳಲಾಗಿದೆ. ಈ ಹಿಂದಿನ ಕೆಲ ಪ್ರಕರಣಗಳ ಆಧಾರದಂತೆ ಬೇರೆ ರಾಜ್ಯದ ಮೀನುಗಾರರು ನಮ್ಮ ಮೀನುಗಾರರನ್ನು ಅಪಹರಿಸಿರುವ ಸಂಶಯ ಇದೆ. ಈ ವಿಚಾರದಲ್ಲೂ ನೆರೆ ರಾಜ್ಯಗಳ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದರು.

ಪ್ರಕರಣ ಸಂಬಂಧ ಡಿ. 22ರಂದು ದೂರು ದಾಖಲಿಸಿಕೊಳ್ಳಲಾಗಿದೆ. ಮೀನುಗಾರರ ಪತ್ತೆಗಾಗಿ ನೆರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೂ ಪತ್ರ ಬರೆದು ಮನವಿ ಮಾಡಲಾಗಿದೆ. ಆದರೆ, ಈವರೆಗೆ ಯಾವುದೇ ಪ್ರತಿಫಲ ಸಿಕ್ಕಿಲ್ಲ. ರಾಜ್ಯ ಸರ್ಕಾರದಿಂದ ಸ್ಥಳೀಯ ಮೀನುಗಾರರ ಸಹಕಾರ ಪಡೆದು ಎಲ್ಲ ಬಂದರುಗಳೂ ಸೇರಿ ಶಂಕಾಸ್ಪದ ಸ್ಥಳಗಳಲ್ಲಿ ಪತ್ತೆ ಕಾರ್ಯ ನಡೆಸಲಾಗಿದೆ. ಸಮುದ್ರದಲ್ಲಿ ಹೆಲಿಕಾಪ್ಟರ್ ಮತ್ತು ತಟ ರಕ್ಷಣಾ ಪಡೆಗಳ ಮೂಲಕ ಪತ್ತೆಗೆ ಪ್ರಯತ್ನಿಸಲಾಗಿದೆ ಎಂದರು.

ಈಗಾಗಲೆ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ನೌಕಾದಳವನ್ನು ಬಳಸಿಕೊಳ್ಳಲು ಕೋರಲಾಗಿದೆ. ಅಲ್ಲದೆ ಗೂಗಲ್ ಸೇರಿ ಉಪಗ್ರಹ ಸಂಸ್ಥೆಗಳ ನೆರವು ಪಡೆಯಲಾಗಿದೆ ಎಂದರು.

ಸ್ಥಳೀಯ ಶಾಸಕರಾದ ದಿನಕರ ಶೆಟ್ಟಿ, ಸುನೀಲ ನಾಯ್ಕ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಜಿಲ್ಲಾಧಿಕಾರಿ ಎಸ್. ಎಸ್. ನಕುಲ್, ಎಸ್​ಪಿ ವಿನಾಯಕ ಪಾಟೀಲ್, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ, ಸದಸ್ಯ ಪ್ರದೀಪ ನಾಯಕ ಇತರರು ಇದ್ದರು.

ಮೀನುಗಾರ ಕುಟುಂಬಕ್ಕೆ ಪರಿಹಾರ: ಮಲ್ಪೆಯಿಂದ ನಾಪತ್ತೆಯಾಗಿರುವ ಮೀನುಗಾರರ ಕುಟುಂಬಕ್ಕೆ ತಲಾ 1 ಲಕ್ಷ ರೂ. ತಾತ್ಕಾಲಿಕ ಪರಿಹಾರ ನೀಡಲಾಗುವುದು ಎಂದು ಸಚಿವರು ಹೇಳಿದರು. ಜಿಲ್ಲಾಧಿಕಾರಿಗಳು ಪ್ರಸ್ತಾವನೆ ಕಳಿಸಿದರೆ ಮುಖ್ಯಮಂತ್ರಿ ಪರಿಹಾರ ನಿಧಿಯಡಿ ಗುರುವಾರವೇ ವ್ಯವಸ್ಥೆ ಮಾಡಲಾಗುವುದು ಎಂದರು.

ಏಕರೂಪದ ಪರಿಹಾರ: ಮೀನುಗಾರಿಕೆ ಸಂದರ್ಭದಲ್ಲಿ ಮೃತಪಟ್ಟ ಮೀನುಗಾರರು ಸಹಕಾರಿ ಸಂಘದ ಸದಸ್ಯರಾಗಿದ್ದರೆ ಮಾತ್ರ ಅವರ ಕುಟುಂಬಕ್ಕೆ ಪರಿಹಾರ ನೀಡುವ ಪದ್ಧತಿ ರೂಢಿಯಲ್ಲಿದ್ದು, ಅದನ್ನು ತಪ್ಪಿಸಲಾಗುವುದು. ಅಲ್ಲದೆ, ಮೀನುಗಾರಿಕೆ ಸಂದರ್ಭದಲ್ಲಿ ಮೃತಪಡುವ ಎಲ್ಲ ಮೀನುಗಾರರ ಕುಟುಂಬಕ್ಕೆ ತಲಾ 6 ಲಕ್ಷ ರೂ. ಪರಿಹಾರ ನೀಡುವ ಏಕರೂಪದ ಪದ್ಧತಿಯನ್ನು ಜಾರಿಗೆ ತರಲಾಗುವುದು ಎಂದು ಸಚಿವರು ಭರವಸೆ ನೀಡಿದರು. 

ಸಚಿವರ ಭೇಟಿ: ಕುಮಟಾ ತಾಲೂಕಿನ ಮಾದನಗೇರಿ ಸತೀಶ ಈಶ್ವರ ಹರಿಕಂತ್ರ, ಹೊಲನಗದ್ದೆಯ ಲಕ್ಷ್ಮಣ ಪಟಗಾರ, ಭಟ್ಕಳ ತಾಲೂಕಿನ ಅಳಿವೆಕೋಡಿಯ ಹರೀಶ ಮೊಗೇರ, ಬೆಳ್ನಿಯ ರಮೇಶ ಮೊಗೇರ ಅವರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದರು.

ಮೀನುಗಾರ ಮುಖಂಡರ ಸಲಹೆ

ಭಟ್ಕಳ: ಸಚಿವರು ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಕಾಣೆಯಾದವರ ಪತ್ತೆಗೆ ಮೀನುಗಾರ ಮುಖಂಡರ ಸಲಹೆ ಕೋರಿದರು.

ಮುಖಂಡರಾದ ಯಾದವ ಮೊಗೇರ, ವಸಂತ ಖಾರ್ವಿ ಮಾತನಾಡಿ, ರತ್ನಗಿರಿಯ ಕೆಲವರು ಇಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಅವರು ಸೆರೆ ಹಿಡಿದಿರುವ ಸಾಧ್ಯತೆಗಳಿದ್ದು, ಆ ನಿಟ್ಟಿನಲ್ಲಿ ತನಿಖೆ ನಡೆಸಬೇಕು. ಡಿ. 22ರಂದು ಮಾಲೆಗಾಂವ್​ನಲ್ಲಿ ನಾಪತ್ತೆಯಾದ ಮೀನುಗಾರಿಕೆ ಬೋಟ್ ಅನ್ನು ಕೆಲವರು ನೋಡಿದ್ದಾರೆ ಎಂಬ ವಾಯ್್ಸ ಮೇಸೆಜ್ ವೈರಲ್ ಆಗಿದೆ. ಮತ್ತು ಅನ್ಯ ರಾಜ್ಯಗಳ ಸಮುದ್ರ ಹಾಗೂ ಹೊಳೆ ಹಿನ್ನೀರು ಪ್ರದೇಶದಲ್ಲಿಯೂ ಪತ್ತೆ ಕಾರ್ಯ ನಡೆಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಮಾತನಾಡಿ, ನಾಪತ್ತೆಯಾದ ಮಾಹಿತಿ ದೊರೆತ ತಕ್ಷಣ ಗೋವಾ ಮತ್ತು ಮಹಾರಾಷ್ಟ್ರದ ಕಲೆಕ್ಟರ್​ಗಳೊಂದಿಗೆ ರ್ಚಚಿಸಿದ್ದಲ್ಲದೆ, ಅಲ್ಲಿಯ ನೆಲೆಗಳಿಗೆ ತೆರಳಿ ಪರಿಶೀಲಿಸಲಾಗಿದೆ ಎಂದರು.

ಉತ್ತರ ಕನ್ನಡವೆಂದರೆ ತಿರಸ್ಕಾರ: ಉತ್ತರ ಕನ್ನಡ ಜಿಲ್ಲೆಯ 5 ಮೀನುಗಾರರು ನಾಪತ್ತೆಯಾಗಿದ್ದಾರೆ. ಇಲ್ಲಿಯವರೆಗೂ ಯಾವ ಜನಪ್ರತಿನಿಧಿಯೂ ಭೇಟಿ ನೀಡಿಲ್ಲ. ಉಡುಪಿ ಜಿಲ್ಲೆಗೆ ಈಗಾಗಲೆ 2 ಬಾರಿ ಗೃಹ ಸಚಿವರು, 2 ಬಾರಿ ಮೀನುಗಾರಿಕೆ ಸಚಿವರು ಭೇಟಿ ನೀಡಿದ್ದಾರೆ. ಮೀನುಗಾರರ ಸಮಾವೇಶವನ್ನು ಅಲ್ಲಿಯೇ ನಡೆಸಿದ್ದಾರೆ. ಇಲ್ಲಿಯವರಿಗೆ ಬರಿ ತಿರಸ್ಕಾರಗಳೇ ಎಂದು ಸಚಿವರ ಎದುರೇ ಮೀನುಗಾರ ಮುಖಂಡರು ಹರಿಹಾಯ್ದರು.