ಮಿತ ಸಂಸಾರ, ನಿರ್ವಹಣೆ ಸಾಕಾರ

ಹಾವೇರಿ: ಜನಸಂಖ್ಯೆ ನಿಯಂತ್ರಣ ಸಾಧ್ಯವಾಗದಿದ್ದರೆ ಆರ್ಥಿಕ, ಸಾಮಾಜಿಕ ಸಮಸ್ಯೆಗಳು ಗಂಭೀರವಾಗಲಿವೆ ಎಂದು ಜಿಪಂ ಸಿಇಒ ಕೆ. ಲೀಲಾವತಿ ಹೇಳಿದರು.

ವಿಶ್ವ ಜನಸಂಖ್ಯೆ ದಿನಾಚರಣೆ ಅಂಗವಾಗಿ ಗುರುವಾರ ನಗರದ ಹುಕ್ಕೇರಿಮಠದ ಮಹಿಳಾ ಕಾಲೇಜ್​ನಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜನಸಂಖ್ಯಾ ಬೆಳವಣಿಗೆಯಲ್ಲಿ ಜಗತ್ತಿನ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ 121 ಕೋಟಿ ಗೂ ಅಧಿಕ ಜನರಿದ್ದಾರೆ. ಪ್ರಸ್ತುತ ದೇಶದ ಭೂ ವಿಸ್ತೀರ್ಣ ಹಾಗೂ ಜನಸಂಖ್ಯೆಗೆ ಹೊಲಿಸಿದರೆ ಭವಿಷ್ಯದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಕೊರತೆ ಎದುರಾಗಬಹುದು. ದೇಶವು ಆರ್ಥಿಕ ಮತ್ತು ಸಾಮಾಜಿಕ ದುಷ್ಪರಿಣಾಮಗಳನ್ನು ಭವಿಷ್ಯದಲ್ಲಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ದೇಶದ ಸಂಪನ್ಮೂಲಗಳ ಲಭ್ಯತೆ ಹಾಗೂ ಜನಸಂಖ್ಯೆಯನ್ನು ತುಲನೆ ಮಾಡಿದಾಗ ಜನಸಂಖ್ಯಾ ನಿಯಂತ್ರಣ ಇಂದಿನ ತುರ್ತು ಅಗತ್ಯವಾಗಿದೆ. ಬಡತನ, ಅಜ್ಞಾನ, ಮೂಢನಂಬಿಕೆಯಿಂದ ಹೊರಬಂದು ಎಲ್ಲರೂ ಸಾಕ್ಷರರಾಗಿ, ವಿದ್ಯಾವಂತರಾಗಿ ಮಿತ ಸಂಸಾರದ ಕುಟುಂಬ ನಿರ್ವಹಣೆಗೆ ಮುಂದಾಗಬೇಕು ಎಂದರು.

ಕಾರ್ಯಕ್ರಮಕ್ಕೂ ಮುನ್ನ ಕುಟುಂಬ ಜಿಲ್ಲಾಸ್ಪತ್ರೆ ಆವರಣದಿಂದ ಹಮ್ಮಿಕೊಂಡಿದ್ದ ಜಾಥಾಕ್ಕೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಚಾಲನೆ ನೀಡಿದರು. ಸುಧಾ ಸಂಗಾಪುರ ಉಪನ್ಯಾಸ ನೀಡಿದರು. ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ದುಗ್ಗತ್ತಿ, ಸದಸ್ಯ ಸಿದ್ದರಾಜ ಕಲಕೋಟಿ, ಪ್ರಾಚಾರ್ಯು ಡಾ. ಸವಿತಾ ಹಿರೇಮಠ, ಡಿಎಚ್​ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ಆರ್​ಸಿಎಚ್ ಅಧಿಕಾರಿ ಡಾ. ಎಂ. ಜಯಾನಂದ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ನಿಲೇಶ ಎನ್., ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಸುಹೀಲ್ ಹರವಿ, ತಾಲೂಕಾ ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ ಇತರರು ಉಪಸ್ಥಿತರಿದ್ದರು.

2011ರ ಜನಗಣತಿ ಆಧಾರದ ಮೇಲೆ ವಿಶ್ವದ ಜನಸಂಖ್ಯೆ 770 ಕೋಟಿ. ಇದರಲ್ಲಿ ಭಾರತದ ಪಾಲು 121 ಕೋಟಿ. ದೇಶದ ಜನಸಂಖ್ಯೆ ಬೆಳವಣಿಗೆ ಹೀಗೆ ಮುಂದುವರೆದರೆ 2024ರ ವೇಳೆಗೆ ಜನಸಂಖ್ಯೆ ಬೆಳವಣಿಗೆಯಲ್ಲಿ ಭಾರತ ಮೊದಲ ಸ್ಥಾನ ಪಡೆಯಲಿದೆ. ಇದರಿಂದ ಉಲ್ಬಣವಾಗುವ ಆರ್ಥಿಕ, ಸಾಮಾಜಿಕ ಅಭಿವೃದ್ಧಿಯ ದುಷ್ಪರಿಣಾಮಗಳನ್ನು ತಡೆಯಲು, ಜನಸಂಖ್ಯೆ ನಿಯಂತ್ರಣಕ್ಕೆ ಇಂದಿನಿಂದಲೇ ಮುಂದಾಗಬೇಕು.

| ಡಾ. ಎಸ್. ದೇವರಾಜ ಕುಟುಂಬ ಕಲ್ಯಾಣಾಧಿಕಾರಿ

Leave a Reply

Your email address will not be published. Required fields are marked *