ಮಿತಿ ಮೀರಿದೆ ಅಕ್ರಮ ಮದ್ಯ ಮಾರಾಟ!

ರಾಣೆಬೆನ್ನೂರ:ಲೋಕಸಭೆ ಚುನಾವಣೆ ಅಖಾಡ ರಂಗೇರುತ್ತಿದ್ದಂತೆ ವಾಣಿಜ್ಯ ನಗರಿ ರಾಣೆಬೆನ್ನೂರಿನಲ್ಲಿ ಅಕ್ರಮ ಮದ್ಯ ಸಾಗಣೆ ಹಾಗೂ ಮಾರಾಟ ಮಿತಿ ಮೀರಿದೆ.

ನಗರ ಪ್ರದೇಶದ ಕೆಲ ಮದ್ಯದಂಗಡಿಯವರು ಆಟೋರಿಕ್ಷಾ ಹಾಗೂ ಟಂಟಂ ವಾಹನಗಳ ಮೂಲಕ ಅಕ್ರಮವಾಗಿ ಗ್ರಾಮೀಣ ಭಾಗಕ್ಕೆ ಮದ್ಯ ಸಾಗಣೆ ಮಾಡುತ್ತಿದ್ದಾರೆ. ಆದರೆ, ಈ ಕುರಿತು ಜಾಗೃತಿ ವಹಿಸಬೇಕಾದ ಅಬಕಾರಿ ಇಲಾಖೆ ಅಧಿಕಾರಿಗಳು ನಿದ್ದೆಗೆ ಜಾರಿದಂತಿದೆ.

ಬೆರಳೆಣಿಕೆಯಷ್ಟು ಪ್ರಕರಣ ಬೆಳಕಿಗೆ: ಚುನಾವಣೆ ನೀತಿ ಸಂಹಿತೆ ಜಾರಿಯಾದ ಮಾ. 10ರಿಂದ ಮಾ. 31ರವರೆಗೆ ರಾಣೆಬೆನ್ನೂರ ಅಬಕಾರಿ ಅಧಿಕಾರಿಗಳು 2,14,052 ರೂ. ಮೌಲ್ಯದ 171.930 ಲೀಟರ್ ಅಕ್ರಮ ಮದ್ಯ, 104.75 ಲೀಟರ್ ಬೀಯರ್ ಹಾಗೂ 4 ಬೈಕ್ ಮತ್ತು 1 ಆಟೋರಿಕ್ಷಾ ವಶಪಡಿಸಿಕೊಂಡಿದ್ದಾರೆ. ಅಕ್ರಮ ದಂಧೆಕೋರರ ವಿರುದ್ಧ 20 ಪ್ರಕರಣಗಳು ದಾಖಲಾಗಿದ್ದು, 13 ಆರೋಪಿಗಳನ್ನು ಬಂಧಿಸಿದ್ದಾರೆ. ರಾಣೆಬೆನ್ನೂರ ಉಪ ವಿಭಾಗದ ಅಧಿಕಾರಿಗಳು 1,54,66 ರೂ. ಮೌಲ್ಯದ 52.620 ಲೀಟರ್ ಅಕ್ರಮ ಮದ್ಯ ಹಾಗೂ 4 ಬೈಕ್ ವಶಪಡಿಸಿಕೊಂಡಿದ್ದಾರೆ. ಒಟ್ಟು 34 ಪ್ರಕರಣ ದಾಖಲಿಸಿಕೊಂಡಿದ್ದು, 28 ಆರೋಪಿಗಳನ್ನು ಕಂಬಿ ಹಿಂದೆ ತಳ್ಳಿದ್ದಾರೆ. ಆದರೆ, ಅಕ್ರಮ ದಂಧೆ ಮಾತ್ರ ನಿಂತಿಲ್ಲ ಎಂಬುದು ಗಮನಾರ್ಹ ಸಂಗತಿ.

ಹದ್ದಿನ ಕಣ್ಣು ಕುರುಡು: ರಾಣೆಬೆನ್ನೂರ ಅಬಕಾರಿ ಉಪ ವಿಭಾಗದ ವ್ಯಾಪ್ತಿಯಲ್ಲಿ ರಾಣೆಬೆನ್ನೂರ, ಹಿರೇಕೆರೂರ ಹಾಗೂ ಬ್ಯಾಡಗಿ ಸೇರಿ ಮೂರು ತಾಲೂಕು ಬರುತ್ತವೆ. ಸಿಎಲ್-2ಅಡಿ 36, ಸಿಎಲ್-7ಅಡಿ 8, ಸಿಎಲ್-9ಅಡಿ 22 ಮದ್ಯದಂಗಡಿ ಕಾರ್ಯನಿರ್ವಹಿಸುತ್ತಿವೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಮಾರಾಟ ತಡೆಯುವ ನಿಟ್ಟಿನಲ್ಲಿ ಅಬಕಾರಿ ಇಲಾಖೆಯಿಂದ ಮಾ. 10ರಿಂದಲೇ ಪ್ರತಿಯೊಂದು ಮದ್ಯ ಮಾರಾಟ ಮಳಿಗೆಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಈ ಮೂಲಕ ಇಲಾಖೆಯ ಅಧಿಕಾರಿಗಳು ಕುಳಿತಲ್ಲಿಂದಲೇ ಅಕ್ರಮ ಮದ್ಯ ಮಾರಾಟವಾಗದಂತೆ ಎಚ್ಚರ ವಹಿಸಬಹುದಾಗಿದೆ. ಆದರೆ, ಅಧಿಕಾರಿಗಳು ಚಾಪೆ ಕೆಳಗೆ ನುಗ್ಗಿದರೆ, ಕಳ್ಳರು ರಂಗೋಲಿ ಕೆಳಗೆ ನುಗ್ಗುವ ಕಲೆಗಾರಿಕೆ ಬೆಳೆಸಿಕೊಂಡಿದ್ದಾರೆ. ಸಿಸಿ ಕ್ಯಾಮರಾ ಅಳವಡಿಸಿದ ಮಾರ್ಗ ಬದಲಿಸಿ ಬೇರೆ ಬೇರೆ ಮಾರ್ಗಗಳ ಮೂಲಕ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದಾರೆ ಎನ್ನುವ ಆರೋಪ ದಟ್ಟವಾಗಿದೆ.

ಎಲ್ಲಿದೆ ಕಾರ್ಯಾಚರಣೆ?: ಲೋಕಸಭೆ ಚುನಾವಣೆ ಆಗಿರುವುದರಿಂದ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ರಾಣೆಬೆನ್ನೂರ ವಿಭಾಗದಲ್ಲಿ 10ಕ್ಕೂ ಅಧಿಕ ತಂಡಗಳನ್ನು ರಚಿಸಿ ದಿನದ 24 ಗಂಟೆ ಕಾರ್ಯಾಚರಣೆಗೆ ಬಿಡಲಾಗಿದೆ. ಅಕ್ರಮ ಮದ್ಯ ಒಂದು ತಾಲೂಕಿನಿಂದ ಮತ್ತೊಂದು ಕಡೆ ಸಾಗಣೆ ನಡೆಯದಂತೆ ಎಚ್ಚರ ವಹಿಸುವುದು ಇವರ ಕೆಲಸ. ಆದರೆ, ಈ ಸಿಬ್ಬಂದಿ ಎಲ್ಲಿ ಯಾವಾಗ ಕಾರ್ಯನಿರ್ವಹಿಸುತ್ತಾರೆ ಎಂಬುದು ತಿಳಿಯುತ್ತಿಲ್ಲ.

ನಿರೀಕ್ಷಕರೇ ಇಲ್ಲ…

ರಾಣೆಬೆನ್ನೂರ ಅಬಕಾರಿ ಕಚೇರಿಯಲ್ಲಿ ಕಾಯಂ ಅಬಕಾರಿ ನಿರೀಕ್ಷಕ ಹಾಗೂ ಉಪ ನಿರೀಕ್ಷಕ ಹುದ್ದೆಗಳು ಖಾಲಿ ಇವೆ. ಚುನಾವಣೆ ನಿಮಿತ್ತ ಸವಣೂರಿನಿಂದ ಹೆಚ್ಚುವರಿಯಾಗಿ ಉಪ ನಿರೀಕ್ಷಕರೊಬ್ಬರನ್ನು ನೇಮಕ ಮಾಡಲಾಗಿದೆ. ಇನ್ನುಳಿದಂತೆ ಸಿಬ್ಬಂದಿ ಮೇಲೆಯೇ ಜವಾಬ್ದಾರಿ ವಹಿಸಲಾಗಿದೆ. ಇದು ಅಕ್ರಮ ಮದ್ಯ ತಡೆಯುವ ಕಾರ್ಯಾಚರಣೆಗೆ ಹಿನ್ನಡೆ ಉಂಟು ಮಾಡಿದೆ.

ಅಕ್ರಮವಾಗಿ ಮದ್ಯ ಮಾರಾಟ ಹಾಗೂ ಪರವಾನಗಿ ನಿಯಮ ಹೊರತುಪಡಿಸಿ ಕಾನೂನುಬಾಹಿರವಾಗಿ ಮದ್ಯ ಮಾರಾಟ ಮಾಡುತ್ತಿರುವ ಎರಡ್ಮೂರು ಅಂಗಡಿಗಳ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಇನ್ನುಳಿದ ಎಲ್ಲ ಮದ್ಯದಂಗಡಿ ಮೇಲೆ ನಿಗಾ ವಹಿಸಲಾಗಿದ್ದು, ಅಕ್ರಮ ಕಂಡು ಬಂದಲ್ಲಿ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುವುದು.

| ವೀರೇಶ ಚಿಕ್ಕರಡ್ಡಿ

ರಾಣೆಬೆನ್ನೂರ ಉಪ ವಿಭಾಗದ

ಉಪ ಅಧೀಕ್ಷಕರು

ಹೊನ್ನತ್ತಿ ಗ್ರಾಮಕ್ಕೆ ಮದ್ಯದಂಗಡಿ ಬೇಡವೇ ಬೇಡ ಎಂದು ಹಲವಾರು ಬಾರಿ ಪ್ರತಿಭಟನೆ ಮಾಡಿದ್ದೇವು. ಆದರೆ, ಅಂಗಡಿ ಮಾತ್ರ ಬಂದ್ ಆಗಲಿಲ್ಲ. ಹೊನ್ನತ್ತಿ ಮಾತ್ರವಲ್ಲ, ಸುತ್ತಮುತ್ತಲಿನ ಗ್ರಾಮಗಳ ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದೆ. ಇದನ್ನು ತಡೆಯಲು ಅಧಿಕಾರಿಗಳು ಮುಂದಾಗಬೇಕು.

| ರೇವಣಮ್ಮ ಹೊನ್ನತ್ತಿ ಗ್ರಾಮದ ಮಹಿಳೆ

Leave a Reply

Your email address will not be published. Required fields are marked *