ಮಿಂಚಿ ಹೋದ ಮಾತಿಗೆ ಚಿಂತಿಸಿ ಫಲವಿಲ್ಲ

ಸ್ಥಳ: ಬೋಸ್ಟನ್. ಸಮಯ: 1885ರ ಒಂದು ದಿನ.

ಓರ್ವ ವಯಸ್ಸಾದ ಮಹಿಳೆ ಮತ್ತು ಆಕೆಯ ಪತಿ ಇಬ್ಬರೂ ರೈಲುನಿಲ್ದಾಣದಲ್ಲಿಳಿದು ಹಾರ್ವರ್ಡ್ ವಿಶ್ವವಿದ್ಯಾಲಯದ ಕಡೆ ಸೋತ ಹೆಜ್ಜೆ ಹಾಕುತ್ತಿದ್ದರು. ಹಾರ್ವರ್ಡ್ ಯೂನಿವರ್ಸಿಟಿಯ ಚೇರ್​ವುನ್ನರನ್ನು ಅವರು ಭೇಟಿಯಾಗಬೇಕಿತ್ತು, ಆದರೆ ಅಷ್ಟು ದೊಡ್ಡ ವಿಶ್ವವಿದ್ಯಾಲಯದ ಮುಖ್ಯಸ್ಥನನ್ನು ಭೇಟಿಯಾಗಲು ಅವರು ಮೊದಲೇ ಅನುಮತಿ ಪಡೆದಿರಲಿಲ್ಲ. ಆದರೂ ಅವರು ವಿಶ್ವವಿದ್ಯಾಲಯದ ಆವರಣದ ಕಚೇರಿಯನ್ನು ಪ್ರವೇಶಿಸಿದರು. ಅಲ್ಲಿ ಇದ್ದ ಕಾರ್ಯದರ್ಶಿ ಬಲು ಚತುರೆ. ಕ್ಷಣಾರ್ಧದಲ್ಲಿ ಇಂತಹ ಬಡ ಗತಿಗೆಟ್ಟ ವ್ಯಕ್ತಿಗಳನ್ನು ಗುರ್ತಿಸುವ ಸಾಮರ್ಥ್ಯ ಹೊಂದಿದ್ದಳು. ಇಂತಹ ದರಿದ್ರಜೀವಿಗಳಿಗೆ ವಿಶ್ವವಿದ್ಯಾಲಯದ ಆವರಣದಲ್ಲಿ ಕಾಲಿಡುವ ಯೋಗ್ಯತೆ ಕೂಡ ಇಲ್ಲ ಎಂದು ನಂಬಿದವಳಾಗಿದ್ದಳು. ‘ನಾವು ಅಧ್ಯಕ್ಷರನ್ನು ನೋಡಬೇಕು’ ಎಂದ ಆ ವೃದ್ಧ ಮೆಲುದನಿಯಲ್ಲಿ. ‘ಅಯ್ಯೋ ಅವರೆಲ್ಲಿ ಬಿಡುವಾಗಿರ್ತಾರೆ, ಇಡೀ ದಿನ ಬ್ಯುಸಿ’ ಎಂದಳಾಕೆ. ‘ಪರವಾಗಿಲ್ಲ ನಾವು ಕಾಯುತ್ತೇವೆೆ’ ಎಂದಳು ಆ ಮಹಿಳೆ.

ಗಂಟೆಗಳು ಉರುಳುತ್ತ ಹೋದವು. ಕೊನೆಗೆ ಬೇಸರವಾಗಿ ಅವರೇ ಹೊರಟುಹೋಗುತ್ತಾರೆಂದು ಕಾರ್ಯದರ್ಶಿಯೂ ಸುಮ್ಮನೆ ಇದ್ದಳು. ಇವರ ಜತೆ ಮಾತನಾಡಿಸಿ ಅಧ್ಯಕ್ಷರ ಅಮೂಲ್ಯ ಸಮಯವನ್ನು ಹಾಳು ಮಾಡಲು ಕಾರ್ಯದರ್ಶಿಗೆ ಮನಸ್ಸೇ ಇರಲಿಲ್ಲ. ಇವರೂ ಹೋಗುವ ಲಕ್ಷಣ ಕಾಣಲಿಲ್ಲ. ಅಂತೂ ಕೊನೆಗೆ ಅಧ್ಯಕ್ಷರ ಜತೆ ಐದು ನಿಮಿಷ ಮಾತಾಡಿಸಿ ಕಳಿಸುವುದೇ ವಾಸಿ ಎಂದು ಸೆಕ್ರೆಟರಿ ಅಧ್ಯಕ್ಷರ ಹತ್ತಿರ ಹೋಗಿ ‘ಆವಾಗಿಂದ ತಲೆ ತಿಂತಾ ಇದಾರೆ, ಒಂದೈದು ನಿಮಿಷ ಮಾತನಾಡಿಸಿ ಕಳುಹಿಸಿಬಿಡಿ, ಹೋಗ್ತಾರೆ ಸುಮ್ಮನೆ’ ಎನ್ನುತ್ತಾಳೆ. ಅಸಹನೆಯಿಂದ ತಲೆಯಾಡಿಸಿದ ಆತ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿದ. ತನ್ನಂತಹ ದೊಡ್ಡ ಮನುಷ್ಯ ಅಂತಹ ವ್ಯಕ್ತಿಗಳೊಂದಿಗೆ ಮಾತನಾಡಬಾರದು ಎಂದು ಆತ ಅಂದುಕೊಂಡರೂ ಈ ಮಾಸಿದ ಬಟ್ಟೆಯ ಕೆಳವರ್ಗದ ಜನರನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಇಟ್ಟುಕೊಳ್ಳುವುದಕ್ಕಿಂತ ಅವರನ್ನು ಮಾತಾಡಿಸಿ ಕಳಿಸಿಬಿಡಬೇಕೆಂದು ಯೋಚಿಸಿ ಒಳಬರಹೇಳಿದ. ದಂಪತಿ ಒಳಗೆ ಬಂದರು. ಪತ್ನಿ ಹೇಳಿದಳು; ‘ನಮಗೆ ಒಬ್ಬನೇ ಮಗ. ಆತ ಒಂದು ವರ್ಷ ನಿಮ್ಮ ವಿಶ್ವವಿದ್ಯಾಲಯದಲ್ಲಿ ಓದಿದ್ದ. ಹಾರ್ವರ್ಡ್ ಎಂದರೆ ಆತನಿಗೆ ತುಂಬಾ ಇಷ್ಟ. ಆದರೆ ಕಳೆದ ವರ್ಷ ಆತ ಆಕಸ್ಮಿಕವಾಗಿ ತೀರಿಕೊಂಡ. ಹಾಗಾಗಿ ಅವನ ನೆನಪಲ್ಲಿ ಈ ಕ್ಯಾಂಪಸ್​ನಲ್ಲಿ ಏನಾದರೂ ಸ್ಮಾರಕ ನಿರ್ವಿುಸಬೇಕೆಂಬುದು ನಮ್ಮ ಬಯಕೆ’. ಅಧ್ಯಕ್ಷನ ಮುಖದ ಮೇಲೆ ಬೇಸರದ ಛಾಯೆಯೂ ಕಾಣಿಸಲಿಲ್ಲ. ಬದಲಾಗಿ ಅಸಹನೆ ಮತ್ತಷ್ಟು ಹೆಚ್ಚಾಯಿತು. ಆತ ಒರಟಾಗಿ ಹೇಳಿದ, ‘ಮೇಡಂ, ಹಾರ್ವರ್ಡ್​ನಲ್ಲಿ ಓದಿ ಸತ್ತವರಿಗೆಲ್ಲ ಇಲ್ಲಿ ಸ್ಮಾರಕ ನಿರ್ವಿುಸುತ್ತ ಕುಳಿತರೆ ಇದು ವಿಶ್ವವಿದ್ಯಾಲಯವಾಗಿರುವುದಿಲ್ಲ, ಬದಲಾಗಿ ಸ್ಮಶಾನವಾಗುತ್ತದೆ’. ‘ಅಯ್ಯೋ ಅದು ಹಾಗಲ್ಲ, ನಾವು ಆತನ ಮೂರ್ತಿ ನಿರ್ವಿುಸಬೇಕೆಂದು ಹೇಳುತ್ತಿಲ್ಲ, ಹಾರ್ವರ್ಡ್​ಗೆ ಒಂದು ಕಟ್ಟಡ ನಿರ್ವಿುಸಿಕೊಡೋಣ ಎಂದು ಯೋಚಿಸುತ್ತಿದ್ದೇವೆ’. ಒಂದು ಕ್ಷಣ ಅಧ್ಯಕ್ಷನಿಗೆ ಏನು ಹೇಳಲೂ ತೋಚಲಿಲ್ಲ, ಎಂತಹ ಮೂರ್ಖರಿವರು, ತಾವೆಲ್ಲಿ ಕುಳಿತಿದ್ದೇವೆ, ಯಾರ ಹತ್ತಿರ ಏನು ಮಾತಾಡುತ್ತಿದ್ದೇವೆ ಎಂಬುದರ ಅರಿವೇ ಈ ಬಡಪಾಯಿಗಳಿಗಿಲ್ಲವಲ್ಲ ಎಂದಾತ ಯೋಚಿಸಿದ. ಅವರ ಇಸ್ತ್ರಿ ಇಲ್ಲದ ಸುಕ್ಕಾದ ಬಟ್ಟೆಯನ್ನೇ ದಿಟ್ಟಿಸುತ್ತ ಹೇಳಿದ, ‘ಕಟ್ಟಡವಾ? ಹುಂ, ಒಂದು ಕಟ್ಟಡಕ್ಕೆ ಎಷ್ಟು ಖರ್ಚಾಗುತ್ತದೆ ಎಂಬುದರ ಅರಿವಾದರೂ ನಿಮಗಿದೆಯೇ? ಈ ವಿಶ್ವವಿದ್ಯಾಲಯದ ಎಲ್ಲ ಕಟ್ಟಡಗಳೂ ಏಳೂವರೆ ಮಿಲಿಯನ್ ಡಾಲರ್ ಬೆಲೆ ಬಾಳುತ್ತವೆ ಎಂದು ಗೊತ್ತಿದೆಯೇ?’ ಒಂದು ಕ್ಷಣ ಆಕೆ ಮೌನವಾದಳು. ಅಧ್ಯಕ್ಷನಿಗೆ ಒಳಗೊಳಗೇ ಖುಷಿಯಾಯಿತು, ಸದ್ಯ, ಈಗಲಾದರೂ ಇವರು ತೊಲಗಬಹುದಲ್ಲ ಎಂದುಕೊಂಡ ಆತ. ಆ ಮಹಿಳೆ ಹಗೂರಕ್ಕೆ ತನ್ನ ಗಂಡನ ಕಡೆ ತಿರುಗಿ ನಿಧಾನವಾಗಿ ಹೇಳಿದಳು, ‘ಒಂದು ವಿಶ್ವವಿದ್ಯಾಲಯ ಆರಂಭಿಸಲು ಬರೀ ಏಳೂವರೆ ಮಿಲಿಯನ್ ಡಾಲರ್ ಸಾಕೇ? ಹಾಗಾದರೆ ನಾವು ಒಂದು ನಮ್ಮದೇ ವಿಶ್ವವಿದ್ಯಾಲಯವನ್ನು ಏಕೆ ಸ್ಥಾಪಿಸಬಾರದು?’ ಗಂಡ ಒಪ್ಪಿಗೆ ಸೂಚಿಸಿ ತಲೆಯಲ್ಲಾಡಿಸಿದ. ಅಧ್ಯಕ್ಷನ ಮುಖ ಆಶ್ಚರ್ಯ ಮತ್ತು ಗೊಂದಲದಿಂದ ಬಣ್ಣ ಕಳೆದುಕೊಂಡಿತು. ಅವನು ನೋಡುತ್ತಿದ್ದಂತೆಯೇ ಶ್ರೀ ಮತ್ತು ಶ್ರೀಮತಿ ಲೇಲ್ಯಾಂಡ್ ಸ್ಟಾ್ಯನ್​ಫೋರ್ಡ್ ನಿಧಾನವಾಗಿ ಕಚೇರಿಯಿಂದ ಹೊರಬಂದು ಕ್ಯಾಲಿಫೋರ್ನಿಯಾದ ಪಾಲೋ ಆಲ್ಟೋಗೆ ತೆರಳಿದರು. ಅಲ್ಲಿ ಅವರು 1884 ರಲ್ಲಿ ವಿಷಮಶೀತಜ್ವರಕ್ಕೆ ಬಲಿಯಾದ ತಮ್ಮ ಮಗನ ನೆನಪಿಗೆ ಸ್ಟಾ್ಯನ್​ಫೋರ್ಡ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು.

ನಿಜ, ಒಂದು ಪುಸ್ತಕವನ್ನು ಅದರ ಮುಖಪುಟಕ್ಕೆ ಉಪಯೋಗಿಸಿದ ಕಾಗದದ ಮೇಲಿಂದ ಅಳೆಯಲಾಗುವುದಿಲ್ಲ. ಆದರೂ ಮುಖ ನೋಡಿ ಮಣೆ ಹಾಕುವ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವಂತಹದ್ದು. ವ್ಯಕ್ತಿಯ ಬಾಹ್ಯರೂಪಕ್ಕೇ ಬೆಲೆ ಕೊಡುವುದು, ಹಾಕುವ ಬಟ್ಟೆ, ಮಾಡುವ ಅಲಂಕಾರಗಳಿಂದ ಜನರಿಗೆ ಗೌರವ ಕೊಡುವುದು ಇತ್ಯಾದಿ ಅತಿ ಸಾಮಾನ್ಯ. ಸರಳವಾಗಿ ಡ್ರೆಸ್ ಮಾಡುವ ವೈದ್ಯರನ್ನು ನೋಡಿ ‘ಅಯ್ಯೋ ಅವರು ಡಾಕ್ಟರ್ ಎಂದೇ ಅನ್ನಿಸುವುದಿಲ್ಲ’ ಎಂದು ಹೇಳುವುದನ್ನು ಅದೆಷ್ಟು ಬಾರಿ ಕೇಳಿಲ್ಲ ಅಥವಾ ಈ ಮಾತುಗಳನ್ನು ನಾವೆಷ್ಟು ಬಾರಿ ಹೇಳಿಲ್ಲ?

ವಾಟ್ಸ್​ಆಪ್​ನಲ್ಲಿ ಯಾರೋ ಕಳುಹಿಸಿದ ಮೇಲಿನ ಈ ಕಥೆ ಸತ್ಯವೋ ಸುಳ್ಳೋ ಎಂಬುದರ ಬಗ್ಗೆ ಚರ್ಚೆಗಳಿವೆ. ಅದೇನೇ ಇರಲಿ, ಕಥೆಯ ಒಂದು ನೀತಿಯಂತೂ ನಮಗೆ ಗೊತ್ತಾಯಿತು, ಮೇಲ್ನೋಟಕ್ಕೆ ಯಾರನ್ನೂ ಅಳೆಯಬಾರದು ಎಂಬ ಪಾಠ ಅದು. ಸ್ವಲ್ಪ ಸಂಯಮದಿಂದ ಮಾತಾಡಿದ್ದರೆ ಮಿಲಿಯಗಟ್ಟಲೆ ಡಾಲರ್ ಅನ್ನು ದಾನವಾಗಿ ಪಡೆಯಬಹುದಾಗಿದ್ದ ಅವಕಾಶವನ್ನು ಹಾರ್ವರ್ಡ್ ಯೂನಿವರ್ಸಿಟಿಯ ಅಧ್ಯಕ್ಷ ಹಾಳುಮಾಡಿಕೊಂಡುಬಿಟ್ಟ! ನಾವು ಕೂಡ ಅಷ್ಟೆ, ಪರಿಶ್ರಮದ ರೂಪದಲ್ಲಿ ಅನಾಕರ್ಷಕವಾಗಿ ಬರುವ ಅವಕಾಶಗಳನ್ನು, ಅವು ನಮಗೆ ತಂದುಕೊಡಬಹುದಾದ ವಿವಿಧ ಲಾಭಗಳನ್ನು ಗುರುತಿಸದೇ ನಿರ್ಲಕ್ಷಿಸುತ್ತೇವೆ. ಆಮೇಲೆ ಪಶ್ಚಾತ್ತಾಪ ಪಡುತ್ತೇವೆ.

ಈ ಕಥೆಯಲ್ಲಿ ಇನ್ನೂ ಒಂದು ಗಮನಿಸಬೇಕಾದ ನೀತಿ ಇದೆ. ಅದು ಮಾನವೀಯತೆಯದು. ಎದುರಿಗಿರುವವರು ಯಾರೇ ಆಗಲಿ, ಅವರಿಗೆ ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನಿಗೆ ನೀಡಬೇಕಾದ ಗೌರವವನ್ನು ನೀಡಲೇಬೇಕು. ಹಳೆಯ ಬಟ್ಟೆಯಲ್ಲಿ ಬಂದ ದಂಪತಿ ಶ್ರೀಮಂತರಾಗಿದ್ದರು ಎಂದು ಮಾತ್ರ ಆ ಅಧ್ಯಕ್ಷ ಪಶ್ಚಾತ್ತಾಪ ಪಡುವುದಲ್ಲ, ತಮ್ಮ ವಿಶ್ವವಿದ್ಯಾಲಯಕ್ಕೆ ಬಂದ ವ್ಯಕ್ತಿಗಳನ್ನು ತಾನು ಸರಿಯಾಗಿ ನಡೆಸಿಕೊಳ್ಳಲಿಲ್ಲವಲ್ಲಾ ಎಂದು ಕೂಡ ಬೇಸರಿಸಿಕೊಳ್ಳಬೇಕು. ಎಲ್ಲರೂ ಶ್ರೀಮಂತರಾಗಿರುವುದಿಲ್ಲ, ಎಲ್ಲರೂ ಬುದ್ಧಿವಂತರಾಗಿರುವುದಿಲ್ಲ, ಆದರೆ ಎಲ್ಲರೂ ಮನುಷ್ಯರೇ, ಹಾಗೂ ಪ್ರತಿಯೊಬ್ಬರೂ ಗೌರವಕ್ಕೆ ಅರ್ಹರು ಎಂಬ ಸರಳ ಸತ್ಯ ನೆನಪಿದ್ದರೆ ಸಾಕು. ನಮ್ಮನ್ನು ಬೇರೆಯವರು ಹೇಗೆ ನಡೆಸಿಕೊಳ್ಳಬೇಕೆಂದು ಬಯಸುತ್ತೇವೆಯೋ ಹಾಗೆಯೇ ನಾವು ಬೇರೆಯವರನ್ನು ನಡೆಸಿಕೊಂಡರೆ ಮುಗಿಯಿತು!! ನಮಗೆ ಒಬ್ಬ ವ್ಯಕ್ತಿ ಯಾವ ಸಹಾಯವನ್ನೂ ತಿರುಗಿ ಮಾಡಲು ಸಾಧ್ಯವಿಲ್ಲ ಎಂದು ಗೊತ್ತಿದ್ದರೂ ಅಂತಹವರಿಗೆ ನಾವು ಮಾಡುವ ಸಹಾಯ ಅತ್ಯುತ್ತಮವಾದದ್ದು, ಸ್ವಾರ್ಥರಹಿತವಾದದ್ದು. ಇದು ಹೀಗೆಯೇ ಸಾಗಬೇಕು. ನಾವು ಖುಷಿಯಿಂದ ತಿನ್ನುವ ಹಣ್ಣುಗಳು, ಕುಡಿಯುವ ಎಳನೀರು ಇವೆಲ್ಲವನ್ನೂ ನೆಟ್ಟಿದ್ದು ಯಾರೋ, ಫಲವುಣ್ಣುತ್ತಿರುವುದು ಯಾರೋ. ಮನುಷ್ಯ ಪ್ರೀತಿ, ಸಹಾನುಭೂತಿ, ಸಹಾಯ, ದಾನ, ಒಳ್ಳೆಯತನ ಇವೆಲ್ಲ ಪ್ರತಿಫಲಾಪೇಕ್ಷೆ ಇಲ್ಲದೇ ನಿರಂತರವಾಗಿ ಸಾಗುತ್ತಿರಬೇಕು. ಪಂಪನ ವಿಕ್ರಮಾರ್ಜುನ ವಿಜಯದಲ್ಲಿ ಭೀಷ್ಮ ಕರ್ಣನಿಗೆ ಹೇಳಿದ್ದ, ‘ಈ ಕುರುಕ್ಷೇತ್ರ ಯುದ್ಧದಲ್ಲಿ ನಿನ್ನ ಸರದಿಯೂ ಬರುತ್ತದೆ ಕರ್ಣಾ’ (ಸೂಳ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್). ಅದೇ ರೀತಿ ತಿರುಗುತ್ತಿರುವ ಈ ಚಕ್ರದಲ್ಲಿ ಅವಶ್ಯಕತೆ ಇದ್ದಾಗ ನಮ್ಮ ಸರದಿಯೂ ಬರುತ್ತದೆ. ಇದನ್ನು ನೆನಪಿಟ್ಟುಕೊಳ್ಳೋಣ. ಮೇಲುಕೀಳಿನ ಅಹಂ ಬಿಟ್ಟು ಎಲ್ಲರನ್ನೂ ಗೌರವಿಸೋಣ. ಮನುಷ್ಯರಾಗಿ ನಾವು ಮಾಡಬೇಕಾದ ಕನಿಷ್ಠ ಕರ್ತವ್ಯವಿದು.

(ಲೇಖಕರು ಉಪನ್ಯಾಸಕಿ, ಕವಯಿತ್ರಿ)

Leave a Reply

Your email address will not be published. Required fields are marked *