ಮಿಂಚಿನ ಪ್ರತಿಭಟನೆ ಜೇವರ್ಗಿ ಸ್ತಬ್ಧ

ವಿಜಯವಾಣಿ ಸುದ್ದಿಜಾಲ ಜೇವರ್ಗಿ
ಸಾಮಾಜಿಕ ಜಾಲತಾಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನಿಸಿದ್ದನ್ನು ಖಂಡಿಸಿ ದಲಿತ ಸಮನ್ವಯ ಸಮಿತಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ರಸ್ತೆ ತಡೆ ನಡೆಸಿ, ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಬಹುತೇಕ ಅಂಗಡಿ- ಮುಂಗಟ್ಟುಗಳು ಮುಚ್ಚಿದ್ದರಿಂದ ಅಘೋಷಿತ ಬಂದ್ ವಾತಾವರಣ ಕಂಡಿತು.

ಅಂಬೇಡ್ಕರ್ ಭಾವಚಿತ್ರ ವಿರೂಪಗೊಳಿಸಿ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ನೆಲೋಗಿಯ ವಿನೋದ ದಬಕಿ ಅವರನ್ನು ಗಡಿಪಾರು ಮಾಡಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ರಾಜ್ಯದಲ್ಲಿ ಶ್ರೀರಾಮ ಸೇನೆ ಸಂಘಟನೆ ನಿಷೇಧಿಸಬೇಕು. ಫೇಸ್ಬುಕ್ನಲ್ಲಿ ಲೈಕ್ ಮಾಡಿದವರ ವಿರುದ್ಧ ಕೇಸ್ ದಾಖಲಿಸಬೇಕು. ನೆಲೋಗಿ ಠಾಣೆ ಪಿಎಸ್ಐ ಅವರನ್ನು ಅಮಾನತು ಮಾಡಬೇಕು. ದಲಿತರ ಮೇಲಿನ ದೌರ್ಜನ್ಯ ತಡೆಯಬೇಕು ಎಂದು ಒತ್ತಾಯಿಸಿದರು.

ಡಾ. ಅಂಬೇಡ್ಕರ್​ ಭಾವಚಿತ್ರಕ್ಕೆ ಅವಮಾನ ಮಾಡಿರುವುದರಿಂದ ಜೇವರ್ಗಿಯಲ್ಲಿ ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ
ವ್ಯಕ್ತಪಡಿಸಿದ ದಲಿತಪರ ಸಂಘಟನೆಗಳ ಪ್ರತಿಭಟನಾಕಾರರು.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ ಅವರು ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ದಲಿತ ಸಂಘಟನೆಗಳ ಹಿರಿಯ ಮುಖಂಡ ವಿಠ್ಠಲ್ ದೊಡ್ಡಮನಿ, ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಾಂತಪ್ಪ ಕೂಡಲಗಿ, ಪ್ರಮುಖರಾದ ಗುರುಶಾಂತ ಪಟ್ಟೆದಾರ್, ಮಲ್ಲೇಶಿ ಸಜ್ಜನ್, ಹಣಮಂತ ಯಳಸಂಗಿ, ಪುಂಡಲೀಕ ಗಾಯಕವಾಡ, ಮಲ್ಲಣ್ಣ ಕೊಡಚಿ, ಭೀಮರಾಯ ನಗನೂರ, ಮರೆಪ್ಪ ಬಡಿಗೇರ, ಶೌಕತ್ ಅಲಿ ಆಲೂರ, ಮಲ್ಲಿಕಾರ್ಜುನ ಕೆಲ್ಲೂರ್, ಬೆಣ್ಣೆಪ್ಪ ಕೊಂಬಿನ್, ಸುನೀಲ ಚನ್ನೂರ್, ಶ್ರೀಮಂತ ಧನಕರ್, ಸಂಗಮೇಶ ಕೊಂಬಿನ್, ಶ್ರೀಹರಿ ಕರಕಿಹಳ್ಳಿ, ರವಿ ಕುರಳಗೇರಾ, ಸಿದ್ರಾಮ ಕಟ್ಟಿ, ಜಗದೇವಿ ಜಟ್ನಾಕರ್, ರಾಜಶೇಖರ ಶಿಲ್ಪಿ, ಶರಣು ಬಡಿಗೇರ, ಶಾಂತಪ್ಪ ಮುದವಾಳ, ಮಹಿಬೂಬ್ ಸಾಬ್ ಇನಾಮದಾರ್, ರಹಿಮಾನ್ ಪಟೇಲ್, ವಿಶ್ವಾರಾದ್ಯ ಗಂವ್ಹಾರ, ಅಜ್ಜು ಲಕ್ಪತಿ, ಚಂದ್ರಶೇಖರ ನೇರಡಗಿ, ಯಲ್ಲಪ್ಪ ಕುಂಟನೂರ, ಮರೆಪ್ಪ ಸರಡಗಿ, ಶಂಕರಲಿಂಗ ಹನ್ನೂರ, ಶಿವಪುತ್ರ ಹಾಗರಗಿ ಇತರರಿದ್ದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಡಿವೈಎಸ್ಪಿ ಎಸ್.ಎಸ್. ಹುಲ್ಲೂರ್, ಸಿಪಿಐ ಡಿ.ಬಿ.ಪಾಟೀಲ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿತ್ತು.

ಪ್ರಯಾಣಿಕರು, ವಾಹನ ಸವಾರರು ಪರದಾಟ

ಪ್ರತಿಭಟನೆಯಿಂದಾಗಿ ಜೇವರ್ಗಿ ಸಂಪೂರ್ಣ ಬಂದ್ ಎಂಬಂತೆ ಕಂಡಿತು. ಪಟ್ಟಣದ ಬಹುತೇಕ ಅಂಗಡಿ- ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಡಾ.ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘಟನೆಗಳ ಮುಖಂಡರು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ವ್ಯತ್ಯಯವಾಗಿತ್ತು. ಜೇವರ್ಗಿ ಪಟ್ಟಣ, ಸೊನ್ನ ಕ್ರಾಸ್, ಮಂದೇವಾಲ, ಜೇರಟಗಿ, ಚಿಗರಳ್ಳಿ ಕ್ರಾಸ್ಗಳಲ್ಲಿ 4 ಗಂಟೆಗೂ ಹೆಚ್ಚು ರಸ್ತೆ ಸಂಚಾರ ತಡೆದಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು. ರಸ್ತೆಯ ಎರಡೂ ಕಡೆ ಸಾಕಷ್ಟು ವಾಹನಗಳು ಸಾಲಾಗಿ ನಿಂತಿದ್ದವು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಿದ್ದರಿಂದ ಸಾವಿರಾರು ಪ್ರಯಾಣಿಕರು ತೊಂದರೆ ಎದುರಿಸಿದರು.