ಮಾ. 10ರೊಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಹುಬ್ಬಳ್ಳಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಮಾ. 10ರೊಳಗೆ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮೈತ್ರಿ ಪಕ್ಷ ಜೆಡಿಎಸ್​ನೊಂದಿಗೆ ಸೀಟು ಹೊಂದಾಣಿಕೆಯ ಚರ್ಚೆ 2-3 ದಿನದಲ್ಲಿ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ ಎಂದರು.

ಫೆ. 23ರಿಂದ ಜಿಲ್ಲಾವಾರು ಸಭೆ ನಡೆಯಲಿದ್ದು, ನಂತರ ಅಭ್ಯರ್ಥಿಗಳ ಯಾದಿ ಅಂತಿಮಗೊಳಿಸುವ ಪ್ರಕ್ರಿಯೆ ಆರಂಭಗೊಳ್ಳಲಿದೆ. ಮೈತ್ರಿ ಪಕ್ಷದೊಂದಿಗೆ ಗೊಂದಲ ಇರದ ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರ ಬಿಡುಗಡೆಗೊಳಿಸುವಂತೆ ವರಿಷ್ಠರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದರು.

ಕೆಪಿಸಿಸಿಗೆ ಅಧ್ಯಕ್ಷ, ಕಾರ್ಯಾಧ್ಯಕ್ಷ ಹೊಣೆ ಹೊತ್ತ ನಂತರ ನಡೆದ ಎಲ್ಲ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಕಂಡಿದ್ದು, ಈ ಚುನಾವಣೆಯಲ್ಲೂ ಮೈತ್ರಿಗೆ ಹೆಚ್ಚು ಸ್ಥಾನಗಳು ಲಭಿಸುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉದ್ಯೋಗದ ಭರವಸೆ: ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮನಾದ ಯೋಧ ಗುರು ಕುಟುಂಬದ ಒಬ್ಬರಿಗೆ ಉದ್ಯೋಗ ಕೊಡುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ಇದರೊಂದಿಗೆ ಆ ಪರಿವಾರದ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳುವಂತೆ ಮನವಿ ಮಾಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು. ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಅನಿಲ ಪಾಟೀಲ, ಅಲ್ತಾಫ್ ಹಳ್ಳೂರ, ಸದಾನಂದ ಡಂಗನವರ, ಮತ್ತಿತರರಿದ್ದರು.