ಮಾಸಾಶನಕ್ಕೆ ಆಧಾರ್ ಆತಂಕ!

ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿನ ಸಾಮಾಜಿಕ ಭದ್ರತಾ ಯೋಜನೆಯ ಅನೇಕ ಫಲಾನುಭವಿಗಳಿಗೆ ಸರ್ಕಾರದ ಮಾಸಾಶನ ಸ್ಥಗಿತಗೊಳ್ಳುವಿಕೆಯ ಆತಂಕ ಕಾಡುತ್ತಿದೆ.ಜೂ.20ರೊಳಗೆ ಫಲಾನುಭವಿಗಳು ಆಧಾರ್ ಸಂಖ್ಯೆಯನ್ನು ಸಂಬಂಧಪಟ್ಟ ತಾಲೂಕು ಕಚೇರಿಗೆ ನೀಡಬೇಕು. ಇಲ್ಲದಿದ್ದಲ್ಲಿ ಮಾಸಾಶನ ಆದೇಶ ರದ್ದಾಗುತ್ತದೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದೆಡೆ ಆಧಾರ್​ನ ಲೋಪದೋಷ ಸರಿಪಡಿಸುವಿಕೆಗೆ ತಿಂಗಳಾನುಗಟ್ಟಲೇ ಸತಾಯಿಸಲಾಗುತ್ತಿದೆ.

ಸರ್ಕಾರ ಸಾಮಾಜಿಕ ಭದ್ರತೆ ಯೋಜನೆಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ವೃದ್ಧಾಪ್ಯ, ಅಂಗವಿಕಲ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ, ವಿಧವಾ ಪಿಂಚಣಿಯನ್ನು ಪ್ರತಿ ತಿಂಗಳು ನೀಡುತ್ತಿದೆ. ಈಗ ನೇರವಾಗಿ ಆಯಾ ಫಲಾನುಭವಿ ಖಾತೆಗೆ ಪಿಂಚಣಿ ಹಣ ಜಮೆ ಮಾಡಲು ಕ್ರಮ ಕೈಗೊಂಡಿದೆ. ಇದರ ಭಾಗವಾಗಿ ಅನರ್ಹರ ಪತ್ತೆ, ದುರ್ಬಳಕೆಗೆ ಕಡಿವಾಣ ಹಾಕಲು ಕಡ್ಡಾಯವಾಗಿ ಫಲಾನುಭವಿಗಳಿಂದ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಪಡೆಯಲಾಗುತ್ತಿದೆ.

ಈಗ ಜುಲೈನ ಬುಕ್ಕಿಂಗ್: ಜಿಲ್ಲೆಯಲ್ಲಿನ ರಾಷ್ಟ್ರೀಕೃತ ಬ್ಯಾಂಕ್​ಗಳು, ಅಂಚೆ ಕಚೇರಿಗಳ ಜತೆಗೆ 157 ಗ್ರಾಪಂ ಕಚೇರಿಗಳಲ್ಲಿ ಆಧಾರ್ ತಿದ್ದುಪಡಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎನ್ನುವುದು ಜಿಲ್ಲಾಡಳಿತದ ಹೇಳಿಕೆ. ಆದರೆ, ವಿದ್ಯುತ್ ಮತ್ತು ಆನ್​ಲೈನ್ ಸಮಸ್ಯೆ, ಸಿಬ್ಬಂದಿ ಕೊರತೆ ನೆಪದಲ್ಲಿ ಗ್ರಾಪಂ ಸಿಬ್ಬಂದಿ ಫಲಾನುಭವಿಗಳನ್ನು ಬೇರೆಡೆಗೆ ಕಳುಹಿಸುತ್ತಿದ್ದಾರೆ. ಅಂಚೆ ಕಚೇರಿ ಸಿಬ್ಬಂದಿ ಅರ್ಜಿಯನ್ನೇ ಸ್ವೀಕರಿಸುತ್ತಿಲ್ಲ. ಇನ್ನೂ ಪ್ರತಿ ತಾಲೂಕಿನಲ್ಲಿ ಕನಿಷ್ಠ ಎರಡು ಬ್ಯಾಂಕ್​ಗಳಲ್ಲಿ ಮಾತ್ರ ತಿದ್ದುಪಡಿಯಾಗುತ್ತಿದೆ. ಅದೂ ದಿನಕ್ಕೆ 20 ಅರ್ಜಿ ಮಾತ್ರ ಸ್ವೀಕಾರ. ಇದರಿಂದ ಸಾವಿರಾರು ಮಂದಿ ಆಧಾರ್ ಕೇಂದ್ರಗಳ ಮುಂಭಾಗ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಈಗ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅರ್ಜಿ ಸಲ್ಲಿಸಿರುವವರಿಗೆ ಅವಕಾಶ ಸಿಗುತ್ತಿದೆ. ಜುಲೈ ಮತ್ತು ಆಗಸ್ಟ್​ಗೆ ಅರ್ಜಿಯ ಬುಕ್ಕಿಂಗ್ ಮುಗಿದಿದೆ. ಹಲವೆಡೆ ಕಿಕ್ಕಿರಿದ ಜನರಿಂದ ಗಲಾಟೆಗಳು ನಡೆಯುತ್ತಿದ್ದು, ಅವ್ಯವಸ್ಥೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ, ಅಧಿಕಾರಿಗಳು ಮಾತ್ರ ಕಿವಿಗೊಡುತ್ತಿಲ್ಲ.

ಮೊದಲು ಸಮಸ್ಯೆ ಬಗೆಹರಿಸಿ: ವೃದ್ಧರು, ಅಂಗವಿಕಲರು, ಅಸಹಾಯಕ ಮಹಿಳೆಯರು ಸರ್ಕಾರದ ಪಿಂಚಣಿಯನ್ನೇ ನೆಚ್ಚಿಕೊಂಡಿದ್ದಾರೆ. ಇದಕ್ಕೆ ಸವಲತ್ತಿನಿಂದ ವಂಚಿತರಾಗದಿರಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಮಾಸಾಶನಕ್ಕೆ ಅರ್ಜಿ ಸಲ್ಲಿಸುವಾಗಲೇ ಆಧಾರ್ ಪಡೆದುಕೊಂಡಿರುವ ಅಧಿಕಾರಿಗಳು, ಇದೀಗ ಅದರಲ್ಲಿನ ಕೆಲ ಲೋಪಗಳನ್ನು ಸರಿಪಡಿಸಲು, ಹುಟ್ಟಿದ ದಿನಾಂಕ ಮತ್ತು ಮೊಬೈಲ್ ಸಂಖ್ಯೆ ಸೇರಿಸಲು ಸೂಚಿಸುತ್ತಿದ್ದಾರೆ. ಆದರೆ, ಇದು ಕೇಂದ್ರಗಳಲ್ಲಿ ಅಷ್ಟು ಸುಲಭವಾಗಿ ನಡೆಯುತ್ತಿಲ್ಲ. ಇದಕ್ಕೆ ಆಧಾರ್ ಸಂಖ್ಯೆ ಜೋಡಣೆ ಗಡುವು ವಿಸ್ತರಣೆ ಇಲ್ಲವೇ ತ್ವರಿತ ಮತ್ತು ಸುಗಮ ಆಧಾರ್ ತಿದ್ದುಪಡಿಗೆ ಸಂಬಂಧಪಟ್ಟವರಿಗೆ ಸೂಚಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಮಾಡಲು ಆಧಾರ್ ಸಂಖ್ಯೆ ಜೋಡಣೆ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಇನ್ನೂ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

| ಬಿ.ಶಿವಸ್ವಾಮಿ, ಉಪ ವಿಭಾಗಾಧಿಕಾರಿ, ಚಿಕ್ಕಬಳ್ಳಾಪುರ

ಹಿಂದೆ ಆಧಾರ್ ಸಂಖ್ಯೆ ಕೊಟ್ಟಿದ್ದೇನೆ. ಈಗ ಮತ್ತೆ ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ ನಮೂದಿಸಿದ ಆಧಾರ್ ನೀಡಬೇಕಾಗಿದೆ. ಆದರೆ, ಎಲ್ಲೂ ಸೇರ್ಪಡೆ ಮಾಡಿಕೊಡುತ್ತಿಲ್ಲ. ಮಾಸಾಶನ ಹೋಗುವ ಆತಂಕ ಎದುರಾಗಿದೆ.

| ವಿಮಲಾ, ಕೀರ್ತಿನಗರ, ಚಿಂತಾಮಣಿ

Leave a Reply

Your email address will not be published. Required fields are marked *