ಹಾಸನ: ಈ ಮಾಸಾಂತ್ಯದೊಳಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.
ಹೊಳೆನರಸೀಪುರ ತಾಲೂಕಿನ ಸಿಂಗನ ಕುಪ್ಪೆ ಗ್ರಾಮದ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ತಮ್ಮ ದಾವೋಸ್ ಭೇಟಿ ಅತ್ಯಂತ ಫಲಪ್ರದವಾಗಿದೆ ರಾಜ್ಯದಲ್ಲಿ ಅನೇಕರು ಬಂಡವಾಳ ಹೂಡಲು ಆಸಕ್ತಿ ತೋರಿದ್ದಾರೆ ಎಂದು ಹೇಳಿದರು. ಹಲವು ಕೈಗಾರಿಕೋದ್ಯಮಿಗಳು ನಮ್ಮ ರಾಜ್ಯಕ್ಕೆ ಬರಲು ಒಪ್ಪಿದ್ದಾರೆ. 40 ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳನ್ನು ತಾವು ವೈಯಕ್ತಿಕವಾಗಿ ಭೇಟಿ ಮಾಡಿ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ವಿನಂತಿಸಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.
ಎಸ್‌ಎಂ.ಕೃಷ್ಣ ಅವರ ನಂತರ 16 ವರ್ಷಗಳು ಕಳೆದ ಮೇಲೆ ತಾವು ದಾವೂಸ್ ಗೆ ಹೋಗಿದ್ದು ತುಂಬಾ ಉಪಯುಕ್ತವಾಯ್ತು. ಬಹಳ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆ ಅಭಿವೃದ್ಧಿ ಮಾಡಲು ಭರವಸೆ ದೊರೆತಿದೆ ಇದರಿಂದ ಕೃಷಿ , ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸಲೂ ಅನುಕೂಲ ಆಗಲಿದೆ ಎಂದು ಮುಖ್ಯ ಮಂತ್ರಿ ತಿಳಿಸಿದರು.
ಮೈಸೂರು ಜಿಲ್ಲೆಯ ದೇವಿತಂದ್ರೆ ಗ್ರಾಮದಲ್ಲಿ ದೇವಾಲಯದ ರಾಜಗೋಪುರ ಉದ್ಘಾಟನೆ ಮುಗಿಸಿ ಕೊಡಗಿಗೆ ತೆರಳುವುದಾಗಿ ಹೇಳಿದ ಅವರು
ಕೊಡಗಿನಲ್ಲಿ 1500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.