ಮಾವು ಸಂಸ್ಕರಣ ಘಟಕಕ್ಕೆ ಗ್ರಹಣ

ರಾಮನಗರ: ಜಿಲ್ಲೆಯಲ್ಲಿ ಮಾವು ಸಂಸ್ಕರಣ ಘಟಕ ಸ್ಥಾಪನೆಗೆ ಹಿಡಿದಿರುವ ಗ್ರಹಣ ಈ ವರ್ಷವೂ ಬಿಡುವ ಲಕ್ಷಣ ಕಾಣುತ್ತಿಲ್ಲ.

ಬರ, ಮಳೆ, ಬೆಲೆ ಕುಸಿತ ಹೀಗೆ ಒಂದಿಲ್ಲೊಂದು ಕಾರಣದಿಂದ ನಷ್ಟಕ್ಕೆ ಒಳಗಾಗಿರುವ ಬೆಳೆಗಾರರ ಅನುಕೂಲಕ್ಕಾಗಿ ಸಂಸ್ಕರಣ ಘಟಕ ಆರಂಭಿಸಬೇಕು ಎನ್ನುವ ಬೇಡಿಕೆ ಬಹಳ ವರ್ಷಗಳಿಂದಲೂ ಕೇಳಿ ಬರುತ್ತಲೇ ಇದೆ. ಆದರೆ ಈ ಬೇಡಿಕೆ ಈ ವರ್ಷ ಈಡೇರುವ ಲಕ್ಷಣ ಇಲ್ಲ.

ಸ್ಥಳ ಸರಿಹೊಂದುತ್ತಿಲ್ಲ: ಸಂಸ್ಕರಣ ಘಟಕಕ್ಕೆ ಮೊದಲ ವಿಘ್ನ ಎದುರಾಗಿರುವುದು ಸೂಕ್ತ ಸ್ಥಳದ ಕೊರತೆ. ಘಟಕಕ್ಕಾಗಿ ರಾಮನಗರ ತಾಲೂಕಿನ ಹರಿಸಂದ್ರ, ಚನ್ನಪಟ್ಟಣದ ಕಣ್ವ ಜಲಾಶಯದ ಬಳಿ ಸೇರಿ ಹಲವು ಕಡೆ ಸ್ಥಳ ಗುರುತು ಮಾಡಲಾಗಿತ್ತು. ಆದರೆ ಯಾವುದೂ ಅಂತಿಮಗೊಂಡಿಲ್ಲ. ಹೂಡಿಕೆದಾರರ ಅಗತ್ಯಕ್ಕೆ ತಕ್ಕಂತೆ ಸ್ಥಳ ಗುರುತಿಸಲು ತೀರ್ವನಿಸಿರುವ ಕಾರಣ ಜಾಗ ಗುರುತಿಸುವುದಕ್ಕೆ ಹಿನ್ನಡೆ ಆಗಿದೆ.

ಬೃಹತ್ ಸಂಸ್ಕರಣಾ ಘಟಕಗಳಿಲ್ಲ: ಕೋಲಾರ ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆಯಾಗಿದ್ದರೆ, ನಂತರದ ಸ್ಥಾನ ರಾಮನಗರದ್ದು. ಇವುಗಳ ಸಮೀಪ ಅಲ್ಲಲ್ಲಿ ಅಲ್ಪ ಪ್ರಮಾಣದ ಸಂಸ್ಕರಣಾ ಘಟಕಗಳು ಇವೆ. ಕೆಲವು ಕಾರ್ಖಾನೆಗಳು ಮಾವು ಋತುವಿನಲ್ಲಿ ಹಣ್ಣನ್ನು ಪಲ್ಪ್ ಆಗಿ ಪರಿವರ್ತಿಸಿ ಸಂಗ್ರಹಿಸಿಟ್ಟುಕೊಳ್ಳುತ್ತವೆ. ಅದನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಎಲ್ಲಿಯೂ ಬೃಹತ್ ಸಂಸ್ಕರಣಾ ಘಟಕಗಳಿಲ್ಲ. ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಬೃಹತ್ ಸಂಸ್ಕರಣಾ ಘಟಕವಿದ್ದು, ಈ ಭಾಗದ ಹಣ್ಣು ಬಹುತೇಕ ಅಲ್ಲಿಗೆ ಸರಬರಾಜಾಗುತ್ತದೆ. ಆಂಧ್ರ ಸರ್ಕಾರ ಕಳೆದ ವರ್ಷ ಸ್ಥಳೀಯ ರೈತರಿಗೆ ಮನ್ನಣೆ ನೀಡುವಂತೆ ಸೂಚನೆ ನೀಡಿದ್ದು ರಾಜ್ಯದಲ್ಲಿ ಮಾವು ಬೆಲೆ ಕುಸಿತದ ಕಾರಣಗಳಲ್ಲಿ ಒಂದಾಗಿತ್ತು.

ಬೆಲೆ ಹೆಚ್ಚಬೇಕು: ರೈತರಿಗೆ ಉತ್ತಮ ಬೆಲೆ ಸಿಗಬೇಕಾದರೆ, ಮಾವಿನ ಹಣ್ಣಿನ ಮಾರುಕಟ್ಟೆ ವ್ಯಾಪ್ತಿ ಹೆಚ್ಚಳವಾಗಬೇಕು. ಮಾವು ಸಂಸ್ಕರಣ ಘಟಕ ಸ್ಥಾಪಿಸಿ ಎನ್ನುವುದು ರೈತರ ಬಹಳ ವರ್ಷಗಳ ಬೇಡಿಕೆ. ಆದರೆ ಸಂಸ್ಕರಣಾ ಘಟಕಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಸಂಬಂಧಿಸಿದ ಕಂಪನಿ ಜತೆ ಒಡಂಬಡಿಕೆ ಮಾಡಿಕೊಂಡು ಘಟಕ ಆರಂಭಿಸದಿರುವುದು ರೈತರ ಬೇಸರಕ್ಕೆ ಕಾರಣವಾಗಿದೆ.

ಹಿಂದೇಟು ಏಕೆ?: ತೋಟಗಾರಿಕೆ ಇಲಾಖೆ, ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಸಹಯೋಗದಲ್ಲಿ ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕ ತೆರೆಯಲು ಉದ್ದೇಶಿಸಲಾಗಿದೆ. ಸದ್ಯ ಆಸಕ್ತರಿಂದ ಟೆಂಡರ್ ಆಹ್ವಾನಿಸಿದ್ದು, 9 ಹೂಡಿಕೆದಾರರನ್ನು ಮಾತುಕತೆಗೆ ಕರೆಯಲಾಗಿದೆ. ಅದನ್ನು ಹೊರತುಪಡಿಸಿ ಹೆಚ್ಚಿನ ಪ್ರಗತಿ ಆಗಿಲ್ಲ. ಟೆಂಡರ್ ಮುಗಿದರೂ ಕಂಪನಿಗಳು ಮುಂದೆ ಬರದೇ ಇರಲು ಕಾರಣ, ಬೃಹತ್ ಸಂಸ್ಕರಣಾ ಘಟಕಗಳನ್ನು ಆರಂಭಿಸಿದರೆ ನಷ್ಟ ಎದುರಾಗಬಹುದು ಎನ್ನುವ ಆತಂಕ. ಬೇಸಿಗೆಯಲ್ಲಿ ಕೇವಲ ಮೂರ್ನಾಲ್ಕು ತಿಂಗಳು ಮಾತ್ರ ಉತ್ಪನ್ನ ದೊರೆಯಲಿದ್ದು, ಉಳಿದ ಅವಧಿಯಲ್ಲಿ ಘಟಕಗಳನ್ನು ಖಾಲಿ ಬಿಟ್ಟರೆ ನಷ್ಟ ಎನ್ನುವುದು ಇದಕ್ಕೆ ಕಾರಣ. ಹೀಗಾಗಿ ಮಾವಿನೊಟ್ಟಿಗೆ ಇತರ ಹಣ್ಣುಗಳ ಸಂಸ್ಕರಣಾ ವ್ಯವಸ್ಥೆಗಳನ್ನು ಒಳಗೊಂಡ ಪೂರ್ಣ ಪ್ರಮಾಣದ ಘಟಕಗಳನ್ನು ಆರಂಭಿಸಬೇಕು ಎಂಬುದು ರೈತರ ಅಭಿಪ್ರಾಯ.

ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ 9 ಕಂಪನಿಗಳು ಆಸಕ್ತಿ ತೋರಿವೆ. ಅವರೊಂದಿಗೆ ಸರ್ಕಾರವು ಸದ್ಯದಲ್ಲಿಯೇ ಮಾತುಕತೆ ನಡೆಸಲಿದೆ. ಅದಾದ ಬಳಿಕ ಸ್ಥಳ ಗುರುತಿಸಲಾಗುವುದು

| ಜೆ.ಗುಣವಂತ, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ

ಮಾವು ಸಂಸ್ಕರಣ ಘಟಕ ಸ್ಥಾಪನೆ ಮಾಡಬೇಕು ಎನ್ನುವುದು ನಮ್ಮ ಹಲವು ವರ್ಷಗಳ ಬೇಡಿಕೆ. ಈ ಬೇಡಿಕೆಗೆ ಸ್ಪಂದಿಸುವಲ್ಲಿ ಸರ್ಕಾರ ವಿಫಲವಾಗುತ್ತಲೇ ಇದೆ. ಈ ವರ್ಷವೂ ಘಟಕ ಆರಂಭವಾಗುವುದು ಅನುಮಾನ ಎಂದಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

| ಸಿದ್ದರಾಜು, ಅಧ್ಯಕ್ಷ, ಜಿಲ್ಲಾ ಮಾವು ಮತ್ತು ತೋಟದ ಬೆಳೆಗಾರರ ಸಂಘ, ರಾಮನಗರ