ಮಾವು ಬೆಲೆಯಲ್ಲಿ ಕಾಣುತ್ತಿಲ್ಲ ಇಳಿಕೆ

ಕಾರವಾರ :ಮಾವಿನ ಫಸಲು ವಿಳಂಬವಾಗಿದ್ದು, ಕಲ್ಲಂಗಡಿ ಮಾರಾಟ ಇದುವರೆಗೂ ಜೋರಾಗಿಯೇ ನಡೆದಿದೆ.

ಅಂಕೋಲಾದ ಪ್ರಸಿದ್ಧ ಕರಿ ಈಶಾಡು ಪ್ರತಿ ವರ್ಷ ಏಪ್ರಿಲ್ ಅಂತ್ಯದಲ್ಲೇ ಕಾರವಾರ ಮಾರುಕಟ್ಟೆಗೆ ಲಗ್ಗೆ ಇಡುತ್ತಿತ್ತು. ಪ್ರತಿ ದಿನ 50 ಕ್ಕೂ ಹೆಚ್ಚು ಮಹಿಳೆಯರು ಕಾರವಾರ ಹಾಗೂ ಅಂಕೋಲಾದ ಗ್ರಾಮೀಣ ಭಾಗಗಳಿಂದ ಹಣ್ಣು ತಂದು ಕಾರವಾರದ ಎಂ.ಜಿ. ರಸ್ತೆ, ಕೋರ್ಟ್ ರಸ್ತೆಗಳಲ್ಲಿ ಮಾರಾಟ ಮಾಡುತ್ತಿದ್ದರು. ಇದರಿಂದ ಮೇ ಹೊತ್ತಿಗೆ ಹಣ್ಣಿನ ದರದಲ್ಲಿ ಇಳಿಕೆ ಕಾಣುತ್ತಿತ್ತು.

ಆದರೆ, ಈ ಬಾರಿ ಇದುವರೆಗೂ ಮಾವಿನ ಹಣ್ಣಿನ ಮಾರಾಟ ಜೋರಾಗಿಲ್ಲ. ಕೆಲವೇ ಕೆಲವು ವ್ಯಾಪಾರಸ್ಥರು ಹಣ್ಣಿನ ಮಾರಾಟ ಆರಂಭಿಸಿದ್ದಾರೆ. ಸ್ಥಳೀಯ ಹಣ್ಣು ಇದುವರೆಗೂ ಮಾರುಕಟ್ಟೆಗೆ ಬಂದಿಲ್ಲ. ಬೆಲೆಯೂ ಇಳಿಕೆಯಾಗಿಲ್ಲ. ಹಣ್ಣಿನ ರುಚಿಯೂ ಅಷ್ಟಿಲ್ಲದ ಕಾರಣ ಕೊಳ್ಳುವವರೂ ಆಸಕ್ತಿ ತೋರುತ್ತಿಲ್ಲ. ಈ ಅವಧಿಗಾಗಲೇ ಪ್ರತಿ ಡಜನ್​ಗೆ 200, 250 ರೂ.ಗೆ ಮಾರಾಟವಾಗುತ್ತಿದ್ದ ಕರಿ ಈಶಾಡು ಮಾವಿನ ಬೆಲೆ ಇದುವರೆಗೂ 320 ರಿಂದ 350 ರೂ.ಇದೆ.

ಸಾಮಾನ್ಯವಾಗಿ ಪ್ರತಿ ವರ್ಷ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟ ನಂತರ ಕಲ್ಲಂಗಡಿ ಹಣ್ಣು ಮೂಲೆಗುಂಪಾಗಿ ಬಿಡುತ್ತದೆ. ಅದನ್ನು ಖರೀದಿಸುವವರ ಸಂಖ್ಯೆ ಕಡಿಮೆಯಾಗಿಬಿಡುತ್ತದೆ. ಆದರೆ, ಈ ಬಾರಿ ಮಾವಿನ ಬೆಲೆ ಇಳಿಯದ ಕಾರಣ ಇದುವರೆಗೂ ಕಲ್ಲಂಗಡಿ ತನ್ನ ಖದರು ಉಳಿಸಿಕೊಂಡಿದೆ.

ಈ ಬಾರಿ ಮಾವಿನ ಹೂವು ಬರಲು ವಿಳಂಬವಾಯಿತು. ಇದರಿಂದ ಇದುವರೆಗೂ ಹಣ್ಣು ಬೆಳೆದಿಲ್ಲ. ಹಣ್ಣು ಕಡಿಮೆ ಇದ್ದುದರಿಂದ ಬೆಲೆ ಇದುವರೆಗೂ ಇಳಿಮುಖವಾಗಿಲ್ಲ.

ಶಾರದಾ ಗೌಡ ಮಾವಿನ ಹಣ್ಣಿನ ವ್ಯಾಪಾರಸ್ಥೆ

Leave a Reply

Your email address will not be published. Required fields are marked *