ಮಾವು ಕೀಳಲು ಹೋದ ಬಾಲಕ ಸಾವು: ವಿದ್ಯುತ್ ತಂತಿ ತಗುಲಿ ಮಾವಿನ ಮರದಲ್ಲೇ ಮೃತ

ಬೆಂಗಳೂರು: ಮಾವಿನಕಾಯಿ ಕೀಳಲು ಹೋದ ಬಾಲಕ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆ. ಜೀವನ್​ಬಿಮಾ ನಗರದ ಸಮೀಪದ ಸುಧಾಮನಗರ ಕೊಳೆಗೇರಿ ನಿವಾಸಿ ಎ. ಭರತ್ (13) ಮೃತ ಬಾಲಕ.

ಭಾನುವಾರ ಬೆಳಗ್ಗೆ 9.30ರಲ್ಲಿ ಜೀವನ್​ಬಿಮಾ ನಗರದ ಬಸ್ ನಿಲ್ದಾಣದ ಸಮೀಪವಿರುವ ಪಿಡಬ್ಲ್ಯುಡಿ ಹಳೆಯ ಕ್ವಾರ್ಟರ್ಸ್ ಆವರಣದಲ್ಲಿ ದುರ್ಘಟನೆ ನಡೆದಿದೆ.

ಕ್ವಾರ್ಟರ್ಸ್ ಆವರಣದಲ್ಲಿ ಮಾವಿನ ಮರವಿದ್ದು, ಅದಕ್ಕೆ ತಾಕುವಂತೆ ವಿದ್ಯುತ್ ಹೈಟೆನ್ಷನ್ ತಂತಿ ಹಾದು ಹೋಗಿದೆ. ಸ್ನೇಹಿತನ ಜತೆ ಅದೇ ರಸ್ತೆಯಲ್ಲಿ ಓಡಾಡುತ್ತಿದ್ದ ಭರತ್ ಮರದ ತುದಿಯಲ್ಲಿ ಮಾವಿನ ಕಾಯಿ ಇರುವುದನ್ನು ಗಮನಿಸಿದ್ದ. ಕಾಯಿ ಕೀಳಲು ಮರಕ್ಕೆ ಹತ್ತಿದಾಗ ತುದಿಯಲ್ಲಿದ್ದ ಕಾರಣ ಕೈಗೆ ಸಿಗಲಿಲ್ಲ.

ಮರದಿಂದ ಕೆಳಗಿಳಿದ ಬಾಲಕ ಹಸಿ ಕೋಲನ್ನು ಕೈಯಲ್ಲಿ ಹಿಡಿದುಕೊಂಡು ಮತ್ತೆ ಮರ ಹತ್ತಿ, ಅದರಿಂದ ಕಾಯಿ ಉದುರಿಸಲು ಯತ್ನಿಸಿದ್ದ. ಆಗ ಕೋಲು ಹೈಟೆನ್ಷನ್ ವಿದ್ಯುತ್ ತಂತಿ ತಾಗಿ ಕರೆಂಟ್ ಪ್ರವಹಿಸಿ ಭರತ್ ಮೃತಪಟ್ಟು ಮರದಲ್ಲೇ ಸಿಲುಕಿಕೊಂಡಿದ್ದ.

ಕೆಳಗಿದ್ ಸ್ನೇಹಿತ ಸ್ಥಳೀಯರಿಗೆ ಬಗ್ಗೆ ಮಾಹಿತಿ ನೀಡಿದ್ದ. ಸ್ಥಳೀಯರು ಸಮೀಪದಲ್ಲಿದ್ದ ಟ್ರಾನ್ಸ್​ಫಾರ್ಮರ್ ಸ್ಥಗಿತಗೊಳಿಸಿ, ಮರದಲ್ಲಿ ಸಿಲುಕಿಕೊಂಡಿದ್ದ ಭರತ್​ನನ್ನು ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆತ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.