ಮಾವಿನ ಹಣ್ಣಿನ ಸವಿರುಚಿಗಳು

ಮಾಧವಿಲತಾ ಚಿಪ್ಪಳಕಟ್ಟೆ ತೀರ್ಥಹಳ್ಳಿ

ಮಾವಿನ ಹಣ್ಣಿನಿಂದ ರಸಾಯನ ಮಾತ್ರವಲ್ಲ, ಇತರ ಬೇರೆ ತಿನಿಸುಗಳನ್ನೂ ಮಾಡಬಹುದು.

ಮಾವಿನ ಹಣ್ಣಿನ ಪಾನಕ

ಸಾಮಗ್ರಿ: ಕಾಡು ಮಾವಿನ ಹಣ್ಣು 10, ಬೆಲ್ಲ 2 ಉಂಡೆ, ಕಾಳುಮೆಣಸಿನ ಪುಡಿ 1/2 ಚಮಚ.

ವಿಧಾನ: ಮಾವಿನ ಹಣ್ಣು ತೊಳೆದು ಸಿಪ್ಪೆ ತೆಗೆದು ಹಿಂಡಿ ಒಂದು ಲೀಟರ್ ನೀರಿಗೆ ಇದನ್ನು ಹಾಕಿ, ಬೆಲ್ಲ ಪುಡಿ ಮಾಡಿ ಹಾಕಿ, ಕಾಳುಮೆಣಸಿನ ಪುಡಿ ಹಾಕಿ ಮಿಶ್ರ ಮಾಡಿ .ಆರೋಗ್ಯದಾಯಕ ಪಾನಕ ರೆಡಿ.

ಮಾವು-ಬಾಳೆಯ ಮಿಲ್ಕ್​ಶೇಕ್

ಸಾಮಗ್ರಿ: ಮಾವಿನ ಹಣ್ಣಿನ ಚೂರುಗಳು 2 ಕಪ್, ಏಲಕ್ಕಿ, ಬಾಳೆಹಣ್ಣು 2 ಕಪ್, ಕಾಯಿಸಿ ತಣ್ಣಗಿರುವ ಹಾಲು 4 ಕಪ್, ಐಸ್ ಕ್ಯೂಬ್, ಸಕ್ಕರೆ 1/4 ಕಪ್.

ವಿಧಾನ: ಮಾವಿನಹಣ್ಣು, ಬಾಳೆಹಣ್ಣು ಸ್ವಲ್ಪ ಹಾಲು, ಐಸ್ ಕ್ಯೂಬ್ ಹಾಕಿ ಗ್ರೖೆಂಡ್ ಮಾಡಿ. ನಂತರ ಉಳಿದ ಪೂರ್ತಿ ಹಾಲು ಸೇರಿಸಿ ಸಕ್ಕರೆ ಹಾಕಿ ಮಿಕ್ಸ್ ಮಾಡಿ.

ಮಾವಿನಹಣ್ಣಿನ ಸಾಸಿವೆ (ಮೊಸರು ಬಜ್ಜಿ)

ಸಾಮಗ್ರಿ: ಕಾಡು ಮಾವಿನ ಹಣ್ಣು 7, ಕಾಯಿತುರಿ 1 ಕಪ್, ಮೊಸರು 2 ಕಪ್, ಹಸಿಮೆಣಸಿನಕಾಯಿ 3, ಸಾಸಿವೆಕಾಳು ಸ್ವಲ್ಪ, ಉಪ್ಪು, ಬೆಲ್ಲ 1 ಉಂಡೆ, ಒಗ್ಗರಣೆಗೆ ಎಣ್ಣೆ, ಒಣಮೆಣಸು , ಕಡಲೇಬೇಳೆ, ಸಾಸಿವೆ.

ವಿಧಾನ: ಮೊದಲು ಮಾವಿನ ಹಣ್ಣು ತೊಳೆದು ಸಿಪ್ಪೆ ತೆಗೆದು ರಸ ಹಿಂಡಿರಿ, ಇದರ ವಾಟೆಯನ್ನು ಬೇಕಿದ್ದರೆ ರಸಕ್ಕೆ ಹಾಕಬಹುದು. ಕಾಯಿತುರಿ, ಹಸಿಮೆಣಸು, ಸಾಸಿವೆ ರುಬ್ಬಿ ಮಿಶ್ರಣಕ್ಕೆ ಹಾಕಿ, ಉಪ್ಪು ಹಾಕಿ, ಬೆಲ್ಲ ಪುಡಿಮಾಡಿ ಹಾಕಿ. ಮೊಸರು ಹಾಕಿ ಒಗ್ಗರಣೆ ಕೊಡಿ. ಸಿಹಿ ಅವರವರ ರುಚಿಗೆ ತಕ್ಕಂತೆ ಹಾಕಿಕೊಳ್ಳಬಹುದು.

ಮಾವಿನ ಹಣ್ಣಿನ ಸಾಂಬಾರ್

ಸಾಮಗ್ರಿ: ಮಾವಿನ ಹಣ್ಣು 5, ಬೆಲ್ಲ 1 ಉಂಡೆ, ಮೆಂತೆ ಸ್ವಲ್ಪ, ಉದ್ದಿನ ಬೇಳೆ 1 ಚಮಚ, ಎಳ್ಳು 1 ಚಮಚ, ಒಣಮೆಣಸು 8, ಕಾಯಿತುರಿ 1 ಕಪ್, ಉಪ್ಪು.

ವಿಧಾನ: ಮಾವಿನಹಣ್ಣನ್ನು ಸಿಪ್ಪೆ ತೆಗೆದು ಹಿಂಡಿ ವಾಟೆಯನ್ನು ಅದಕ್ಜೆ ಹಾಕಿ. ಬೆಲ್ಲ, ಉಪ್ಪು ಹಾಕಿ ಕುದಿಸಿ. ಬಾಣಲೆಗೆ ಎಣ್ಣೆ ಹಾಕಿ ಮೆಂತೆ, ಉದ್ದಿನಬೇಳೆ, ಎಳ್ಳು, ಒಣಮೆಣಸು ಹಾಕಿ ಹುರಿಯಿರಿ. ಇದಕ್ಕೆ ಕಾಯಿತುರಿ ಹಾಕಿ ರುಬ್ಬಿ. ಕುದಿವ ಮಿಶ್ರಣಕ್ಕೆ ಹಾಕಿ. ಸಾಸಿವೆ ಒಗ್ಗರಣೆ ಕೊಡಿ.

ಮಾವಿನ ಹಣ್ಣಿನ ದೋಸೆ

ಸಾಮಗ್ರಿ: 2 ಕಪ್ ನೆನೆಸಿದ ಅಕ್ಕಿ, ಮಾವಿನ ಹಣ್ಣಿನ ಹೋಳು, ಉಪ್ಪು, ಕಾಯಿತುರಿ 1 ಕಪ್, ಒಣಮೆಣಸು 4, ಎಣ್ಣೆ 1/4 ಕಪ್. ವಿಧಾನ: ನೆನೆಸಿದ ಅಕ್ಕಿಗೆ ಮೇಲೆ ತಿಳಿಸಿದ ಸಾಮಗ್ರಿ ಹಾಕಿ ರುಬ್ಬಿ. ಮಾಮೂಲಿ ದೋಸೆ ಹಿಟ್ಟಿಗಿಂತ ಸ್ವಲ್ಪ ನೀರಾಗಿರಲಿ. ಕಾವಲಿಗೆ ಎಣ್ಣೆ ಹಚ್ಚಿ ದೋಸೆ ಹಾಕಿ. ತುಪ್ಪದೊಂದಿಗೆ ತಿನ್ನಬಹುದು.

ಮಾವಿನ ಹಣ್ಣಿನ ಬಾತ್

ಸಾಮಗ್ರಿ: ರವೆ 1 ಕಪ್, ನೀರು 3 ಕಪ್, ಸಣ್ಣಗೆ ಕತ್ತರಿಸಿದ ಮಾವಿನ ಹಣ್ಣು 1/4 ಕಪ್, ತುಪ್ಪ 1/4 ಕಪ್, ಸಕ್ಕರೆ, ದ್ರಾಕ್ಷಿ, ಗೋಡಂಬಿ. ವಿಧಾನ: ತುಪ್ಪ ಬಿಸಿ ಮಾಡಿ ದ್ರಾಕ್ಷಿ, ಗೋಡಂಬಿ ಹುರಿಯಿರಿ, ರವೆಗೆ ತುಪ್ಪ ಹಾಕಿ ಹುರಿಯಿರಿ. ನೀರು ಕುದಿಯಲು ಇಡಿ. ಕುದಿವ ನೀರಿಗೆ ರವೆ ಹಾಕಿ ಬೇಯಿಸಿ ಕತ್ತರಿಸಿದ ಮಾವಿನ ಹಣ್ಣನ್ನು ಹಾಕಿ 1 ನಿಮಿಷ ಮುಚ್ಚಿ ಬೇಯಿಸಿ. ಸಕ್ಕರೆ ಹಾಕಿ ಮಗುಚಿ 2 ನಿಮಿಷ ಸಣ್ಣ ಉರಿಯಲ್ಲಿಡಿ, ದ್ರಾಕ್ಷಿ, ಗೋಡಂಬಿ ಹಾಕಿ.

Leave a Reply

Your email address will not be published. Required fields are marked *