ಮಾವಿಗೆ ಕ್ಯಾಲ್ಸಿಯಂ ಕಾರ್ಬೆಡ್ ಬಳಸುವುದು ಅಪರಾಧ

ಶ್ರೀನಿವಾಸಪುರ: ಮಾವಿನಕಾಯಿಗೆ ಕ್ಯಾಲ್ಸಿಯಂ ಕಾರ್ಬೆಡ್ ಬಳಸಿ ಮಾಗಿಸುವುದು ಕಾನೂನು ಬಾಹಿರ ಹಾಗೂ ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ ರೈತರು ಮತ್ತು ವ್ಯಾಪಾರಸ್ಥರು ನೈಸರ್ಗಿಕವಾಗಿ ಅಥವಾ ಇಥಿಲಿನ್ ಅನಿಲ ಬಳಸಿ ಮಾಗಿಸಬೇಕು ಎಂದು ಮಾವು ಅಭಿವೃದ್ಧಿ ಕೇಂದ್ರದ ತೋಟಗಾರಿಕೆ ಉಪನಿರ್ದೇಶಕ ಎಚ್.ಟಿ.ಬಾಲಕೃಷ್ಣ ತಿಳಿಸಿದರು.

ಎಪಿಎಂಸಿ ಸಭಾಂಗಣದಲ್ಲಿ ಶನಿವಾರ ಎಪಿಎಂಸಿ ವರ್ತಕರು ಹಾಗೂ ಮಾವು ಸಗಟು ಮಾರಾಟಗಾರರಿಗೆ ಮಾವು ಕಟಾವು, ಗ್ರೈಡಿಂಗ್, ಪ್ಯಾಕಿಂಗ್ ಹಾಗೂ ಇಥಿಲಿನ್ ಬಳಸಿ ಕಾಯಿ ಮಾಗಿಸುವ ಬಗ್ಗೆ ಶನಿವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಮಾರುಕಟ್ಟೆಗೆ ವಿವಿಧ ಜಿಲ್ಲೆಗಳಿಂದ ಮಾವಿನಕಾಯಿ ಬರುತ್ತದೆ. ಇಲ್ಲಿಂದ ಮಾವು ಸಗಟು ವ್ಯಾಪಾರಸ್ಥರಿಗೆ, ಚಿಲ್ಲರೆ ವರ್ತಕರಿಗೆ ಸರಬರಾಜಾಗುತ್ತದೆ. ರಾಜ್ಯ ಹಾಗೂ ಹೊರರಾಜ್ಯಗಳಿಗೂ ಸರಬರಾಜು ಮಾಡಲು ಕ್ಯಾಲ್ಸಿಯಂ ಕಾರ್ಬೆಡ್ ಬಳಸಿ ಮಾಗಿಸುವುದು ಕಂಡು ಬರುತ್ತಿದೆ, ಇದು ಜೀವಕ್ಕೆ ಅಪಾಯಕಾರಿ. ಕಾಯಿಗಳನ್ನು ಈ ರೀತಿ ಹಣ್ಣು ಮಾಡಿದ ರಂಜಕದ ಹೈಡ್ರೈೕಡ್ ಮತ್ತು ಆರ್ಸೆನಿಕ್ ಗುರುತು ಕಂಡು ಬಂದಿದ್ದು, ಇಂತಹ ಹಣ್ಣುಗಳ ಸೇವನೆಯಿಂದ ಕ್ಯಾನ್ಸರ್ ಹೆಚ್ಚಾಗಿರುತ್ತದೆ. ಆಹಾರ ಕಲಬೆರಕೆ ನಿಷೇಧ ನಿಯಮ 1955ರ(44ಎ) ಅನ್ವಯ ಕ್ಯಾಲ್ಸಿಯಂ ಕಾರ್ಬೆಡ್ ಬಳಸುವುದು ನಿಷೇಧವಾಗಿರುವುರಿಂದ ನೈಸರ್ಗಿಕವಾಗಿ ಹಣ್ಣು ಮಾಗಿಸಬೇಕು ಎಂದು ವಿವರಿಸಿದರು.

ಕಾರ್ಬೆಡ್ ಬಳಕೆಯಿಂದ ಅನೇಕ ದುಷ್ಪರಿಣಾಮ ಆಗುತ್ತಿವೆ. ಈ ಬಗ್ಗೆ ಮಾವು ಅಭಿವೃದ್ಧಿ ಮಂಡಳಿಯವರು ವರ್ತಕರಿಗೆ ಹಾಗೂ ಸಗಟು ಮಾರಾಟಗಾರರಿಗೆ ಅರಿವು ಮೂಡಿಸುತ್ತಿರುವುದು ಮಾದರಿ ಎಂದು ತೋಟಗಾರಿಕಾ ಇಲಾಖೆ ನಿವೃತ್ತ ಅಪರ ನಿರ್ದೇಶಕ ಡಾ.ಹಿತ್ತಲಮನಿ ಹೇಳಿದರು.

ಮಾಲೂರಿನ ಆಹಾರ ಸುರಕ್ಷತಾಧಿಕಾರಿ ನಾಗರಾಜ್, ಹೊಗಳಗೆರೆ ಮಾವು ಅಭಿವೃದ್ಧಿ ಸಹಾಯಕ ತೋಟಗಾರಿಕಾ ನಿರ್ದೇಶಕ ಪರಮೇಶ್, ಗೋಪಾಲ್ ಇದ್ದರು. ತಾಲೂಕಿನ ವಿವಿಧ ಭಾಗಗಳಿಂದ 80ಕ್ಕೂ ಹೆಚ್ಚು ವರ್ತಕರು ಹಾಗೂ ಸಗಟು ಮಾರಾಟಗಾರರು, ರೈತರು ಭಾಗವಹಿಸಿದ್ದರು.

ಋತುವಿಗೆ ಬಂದ ಮಾವಿನ ಕಾಯಿಯನ್ನು ಕೋಲಿನಿಂದ ಹೊಡೆದು ಬೀಳಿಸಬಾರದು. ಬಲೆ ಬಳಸಿ ಕಾಯಿ ಕೀಳಬೇಕು. ಮಾರುಕಟ್ಟೆಗೆ ತರುವಾಗ ಆರಿಸಿ ಹಂತಗಳಲ್ಲಿ ಬುಟ್ಟಿಗಳ ಮೂಲಕ ತರಬೇಕು. ಆಗ ಒಳ್ಳೆಯ ಬೆಲೆ ಸಿಗುತ್ತದೆ.

| ಡಾ.ಎಚ್.ಸಿ.ಬಾಲಕೃಷ್ಣ ತೋಟಗಾರಿಕೆ ಮಹಾ ವಿದ್ಯಾಲಯ ಜಿಕೆವಿಕೆ ಸಹಾಯಕ ಪ್ರಾಧ್ಯಾಪಕ

ಕ್ಯಾಲ್ಸಿಯಂ ಕಾರ್ಬೆಡ್ ಬಳಸಿ ಹಣ್ಣು ಮಾಗಿಸುವುದು ಕಾನೂನು ಬಾಹಿರ. ಕಾರ್ಬೆಡ್ ಬಳಕೆ ಕಂಡು ಬಂದಲ್ಲಿ ಹಣ್ಣುಗಳ ಸ್ಯಾಂಪಲ್ ಪಡೆದು ರಾಸಾಯನಿಕ ಪರೀಕ್ಷೆಗೆ ಕಳುಹಿಸಲಾಗುತ್ತದೆ. ವ್ಯತಿರಿಕ್ತ ಫಲಿತಾಂಶ ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು.

| ವೆಂಕಟರಾಜು, ಆರೋಗ್ಯ ಇಲಾಖೆಯ ಆಹಾರ ಸಂರಕ್ಷಣಾಧಿಕಾರಿ

Leave a Reply

Your email address will not be published. Required fields are marked *