ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ
ಚಿಕ್ಕೋಡಿ: ಪೆಟ್ರೋಲ್ ಬಂಕ್ ಎನ್ ಒಸಿ ನೀಡಲು ಹಣದ ಬೇಡಿಕೆ ಇಟ್ಟಿದ್ದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಚಿಕ್ಕೋಡಿ ಪ್ರಾದೇಶಿಕ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿರುವ ವೇಳೆ ಬಲೆಗೆ ಬಿದ್ದಿದ್ದಾರೆ. ಕಾಗವಾಡ ತಾಲೂಕಿನ ವ್ಯಕ್ತಿಯೊರ್ವನ ಬಳಿ ಪೆಟ್ರೋಲ್ ಬಂಕ್‌ಗೆ ಎನ್‌ಒಸಿ ನೀಡುವ ಕುರಿತಾಗಿ ₹12,000 ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪ ಎದುರಾಗಿದೆ. ಲೋಕಾಯುಕ್ತ ಅಧಿಕಾರಿಗಳಿಗೆ ದೊರೆತ ಖಚಿತ ಮಾಹಿತಿಯ ಮೇಲೆ ಅಧಿಕಾರಿಗಳು ಕಚೇರಿಯಲ್ಲಿ ದಾಳಿ ನಡೆಸಿದ್ದಾರೆ.
ದಾಳಿಯಲ್ಲಿ ಪರಿಸರ ಮಾಲಿನ್ಯ ಕಚೇರಿ ಪರಿಸರ ಅಧಿಕಾರಿ ಶೋಭಾ ಪೊಳ್ ಹಾಗೂ ಕಂಪ್ಯೂಟರ್ ಆಪರೇಟರ್ ಪ್ರವೀಣ ದೊಡಮನಿ ಎಂಬುವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಇಬ್ಬರೂ ಸೇರಿ ಸಾಗರ ದೊಡಮನಿ ಎಂಬುವರಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದರು.
ಲೋಕಾಯುಕ್ತ ಡಿವೈಎಸ್ಪಿ ಬಿ.ಎಸ್. ಪಾಟೀಲ ಮತ್ತು ಇನ್ಸ್‌ಪೆಕ್ಟರ್ ಎಸ್.ಎಚ್. ಹೋಸಮನಿ ನೇತೃತ್ವ ವಹಿಸಿದ್ದರು.