ಮಾಲಿನ್ಯದಿಂದ ಪ್ರಾಕೃತಿಕ ವಿಪತ್ತು

ತುಮಕೂರು: ಉತ್ತಮ ಭವಿಷ್ಯಕ್ಕೆ ಸುತ್ತಮುತ್ತಲಿನ ಪರಿಸರದ ಜತೆ ನೈಸರ್ಗಿಕ ಅರಣ್ಯ ಪ್ರದೇಶ ಉಳಿಸಬೇಕಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಣೇಶ್ ಹೇಳಿದರು.

ಜಿಪಂ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಪಂ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ‘ವಿಶ್ವ ಭೂ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದರು.

ಪರಿಸರ ಮಾಲಿನ್ಯದಿಂದ ಪ್ರಾಕೃತಿಕ ವಿಪತ್ತು ಸಂಭವಿಸುತ್ತಿದ್ದು, ಕುಡಿಯುವ ನೀರಿಗೆ ಅಭಾವ ಉಂಟಾಗುತ್ತಿದೆ. ಪರಿಸರ ಮಾಲಿನ್ಯ ತಡೆಗಟ್ಟುವುದು ಎಲ್ಲರ ಜವಾಬ್ದಾರಿಯಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ನೀರು ಸಾಕಷ್ಟಿದೆ ಎಂದು ಪೋಲು ಮಾಡುವುದು ಒಳಿತಲ್ಲ. ಮಿತವಾಗಿ ಬಳಸಬೇಕು ಎಂದು ಸಲಹೆ ನೀಡಿದರು.

ಸಸ್ಯ ಸಂಪತ್ತು, ಜಲಸಂಪತ್ತು ಅತ್ಯಮೂಲ್ಯವಾಗಿದ್ದು, ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಗಿಡ ಬೆಳೆಸುವ ಮೂಲಕ ಅರಣ್ಯ ಸಂಪತ್ತು ಹೆಚ್ಚಿಸಬೇಕು ಎಂದು ಕರೆ ನೀಡಿದರು.

ಜಿಪಂ ಸಿಇಒ ಶುಭಾ ಕಲ್ಯಾಣ್ ಮಾತನಾಡಿ, ಶುದ್ಧ ಗಾಳಿ, ನೀರು, ಅಹಾರ ಸಿಗಲು ಪ್ರತಿಯೊಬ್ಬರೂ ನೆಲ, ಜಲ ರಕ್ಷಣೆ ಮಾಡಬೇಕು. ಮಾಲಿನ್ಯಕ್ಕೆ ಕಡಿವಾಣ ಇಲ್ಲದ ಕಾರಣ ವಾತಾವರಣ ಹೆಚ್ಚಾಗಿ ಕಲುಷಿತಗೊಳ್ಳುತ್ತಿದೆ ಎಂದು ವಿಷಾದಿಸಿದರು.

ಜಿಪಂ ಉಪಕಾರ್ಯದರ್ಶಿ ಡಿ.ಕೃಷ್ಣಪ್ಪ ಮಾತನಾಡಿ, ನಾವು ನಿಂತ ನೆಲವನ್ನೇ ನಾಶ ಮಾಡುತ್ತಿದ್ದೇವೆ. ಭೂಮಿ ಚೆನ್ನಾಗಿದ್ದರೆ ನಾವು ಉತ್ತಮ ಗಾಳಿ ಸವಿಯಲು ಸಾಧ್ಯ, ಇಲ್ಲದಿದ್ದರೆ ಆರೋಗ್ಯದಲ್ಲಿ ಏರುಪೇರಾಗುತ್ತದೆ ಎಂದು ಎಚ್ಚರಿಸಿದರು.

ಪ್ರಕೃತಿ ಮಹತ್ವ ಅರಿತು ಉಳಿಸುವುದು ನಮ್ಮ ಧರ್ಮ ಎಂದು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಜಿಪಂ ಉಪಕಾರ್ಯದರ್ಶಿ ಡಾ.ಎಸ್.ಪ್ರೇಮ್ ಕುಮಾರ್(ಆಡಳಿತ), ಮುಖ್ಯ ಯೋಜನಾಧಿಕಾರಿ ಬಾಲರಾಜು, ಮುಖ್ಯ ಲೆಕ್ಕಾಧಿಕಾರಿ ಕನಕರಾಜು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ ಇತರರಿದ್ದರು.

ಮನುಷ್ಯನ ಸ್ವಾರ್ಥಕ್ಕೆ ಪರಿಸರ ಬಲಿಯಾಗುತ್ತಿದೆ. ಪರಿಸರಕ್ಕೆ ಹಾನಿಯಾಗುವ ಪ್ಲಾಸ್ಟಿಕ್, ವಿಷಪೂರಿತ ವಸ್ತುಗಳ ಬಳಕೆ ಕಡಿಮೆ ಮಾಡಬೇಕು. ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆಯಾಗಬೇಕೆಂದರೆ ಪ್ರತಿಯೊಬ್ಬರೂ ಸಸಿ ನೆಟ್ಟು ಪೋಷಿಸಬೇಕು.

| ಶುಭಾ ಕಲ್ಯಾಣ್ ಜಿಪಂ ಸಿಇಒ

Leave a Reply

Your email address will not be published. Required fields are marked *