ಹನೂರು: ಗ್ರಾಮ ಪಂಚಾಯಿತಿ ಸಮೀಪವೇ ಇರುವ ಸಾರ್ವಜನಿಕ ಸಮುದಾಯ ಶೌಚಗೃಹವನ್ನು ಬಳಕೆಗೆ ಲಭ್ಯವಾಗುವಂತೆ ತಾಲೂಕಿನ ಮಾರ್ಟಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಭಾಗದಲ್ಲಿ ಮಾರ್ಟಳ್ಳಿ ಗ್ರಾಮ ಸುತ್ತಮುತ್ತಲ ಹಳ್ಳಿಗೆ ಕೇಂದ್ರ ಸ್ಥಾನವಾಗಿದ್ದು, ಇಲ್ಲಿಗೆ ಕೆಲಸ ಕಾರ್ಯಗಳ ನಿಮಿತ್ತ ಜನರು ಆಗಮಿಸುತ್ತಾರೆ. ಆದರೆ ಗ್ರಾಮ ಪಂಚಾಯಿತಿ ಹತ್ತಿರವಿರುವ ಬಸ್ ನಿಲ್ದಾಣದ ಬಳಿ ಶೌಚಗೃಹ ಇರಲಿಲ್ಲ. ಇದರಿಂದ ಶೌಚಕ್ಕಾಗಿ ಜನರು ತೊಂದರೆ ಪಡುವಂತಾಗಿತ್ತು. ಈ ಹಿನ್ನೆಲೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಕಳೆದ 3 ವರ್ಷಗಳ ಹಿಂದೆ ಗ್ರಾಪಂನಿಂದ ಶೌಚಗೃಹವನ್ನು ನಿರ್ಮಿಸಲಾಯಿತು. ಆದರೆ ನೀರಿನ ಸೌಕರ್ಯ ಕಲ್ಪಿಸದ ಪರಿಣಾಮ ಬಳಕೆಗೆ ಬಾರದಂತಾಗಿದೆ. ಇದರಿಂದ ಶೌಚಕ್ಕಾಗಿ ಜನರು ತುಂಬ ತೊಂದರೆ ಅನುಭವಿಸುವಂತಾಗಿದೆ. ಇತ್ತ ಬಸ್ ನಿಲ್ದಾಣದಲ್ಲಿ ಬಸ್ಸುಗಳು ಕೆಲ ಸಮಯ ನಿಂತು ತೆರಳುವುದರಿಂದ ಚಾಲಕರು ಸಹ ಶೌಚಕ್ಕಾಗಿ ಸಮಸ್ಯೆ ಎದುರಿಸುವಂತಾಗಿದೆ.
ಶೌಚಗೃಹವನ್ನು ಸೇವೆಗೆ ಲಭ್ಯವಾಗುವಂತೆ ಗ್ರಾಪಂ ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಶೌಚಗೃಹ ಇದ್ದು ಇಲ್ಲದಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಶೌಚ ಗೃಹವನ್ನು ಬಳಕೆಗೆ ಬರುವಂತೆ ಕ್ರಮವಹಿಸುವುದರ ಮೂಲಕ ಅನುಕೂಲ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.