ಮಾರ್ಚ್​ನೊಳಗೆ 3 ಹೊಸ ಗ್ರಿಡ್

ಶಿರಸಿ: ಬನವಾಸಿ, ಹತ್ತರಗಿ ಮತ್ತು ಕಾನಸೂರು ವಿದ್ಯುತ್ ಗ್ರಿಡ್ ಸ್ಥಾಪನೆಗೆ ಜಾಗದ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಮಾರ್ಚ್ ಅಂತ್ಯದೊಳಗೆ ಇವು ಕಾರ್ಯಾರಂಭಿಸಿ ಈ ಭಾಗದ ವಿದ್ಯುತ್ ಸಮಸ್ಯೆ ಬಗೆಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ ಹೇಳಿದರು.

ತಾಲೂಕಿನ ಗೋಳಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಹೆಸ್ಕಾಂ ಮತ್ತು ಕೆಪಿಟಿಸಿಎಲ್ ವಿವಿಧ ಯೋಜನೆ ಮತ್ತು ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಕೆಪಿಟಿಸಿಎಲ್ ಅಧಿಕಾರಿಗಳು ಹುಬ್ಬಳ್ಳಿಯಲ್ಲಿಯೇ ವಾಸ್ತವ್ಯ ಮಾಡುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯ ಕೆಡಿಪಿ ಸಭೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಜಿಲ್ಲೆಯ ಜನತೆ ವಿದ್ಯುತ್​ಗಾಗಿ ಭೂಮಿ ತ್ಯಾಗ ಮಾಡಿದ್ದಾರೆ. ಕೆಪಿಟಿಸಿಎಲ್​ಪ್ರಮುಖ ಅಧಿಕಾರಿಗಳು ಜಿಲ್ಲೆಯಲ್ಲಿ ವಾಸ್ತವ್ಯ ಮಾಡಬೇಕು’ ಎಂದು ಸೂಚಿಸಿದರು.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,‘ಶಿರಸಿಯಲ್ಲಿ 20 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಅಳವಡಿಸುವ ಸಲುವಾಗಿ ನೆಲ ಮಾಡಿಕೊಳ್ಳಲು ಹಲವು ದಿನ ವಿದ್ಯುತ್ ಸ್ಥಗಿತಗೊಳಿಸಲಾಗಿದೆ. ಈಗ ಪರಿವರ್ತಕ ಅಳವಡಿಸಲು ಅನುಮತಿ ದೊರೆತಿಲ್ಲ ಎಂಬ ಕುಂಟು ನೆಪ ಹೇಳುತ್ತಿದ್ದಾರೆ’ ಎಂದು ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಹೆಸ್ಕಾಂ ಅಧಿಕಾರಿಗಳು, ಮುಖ್ಯ ಕಚೇರಿಯಿಂದ ಅನುಮತಿ ಲಭಿಸಲು ವಿಳಂಬವಾಗುತ್ತಿದೆ. ಉನ್ನತ ಅಧಿಕಾರಿಗಳನ್ನು ಸಂರ್ಪಸಿ ಶೀಘ್ರದಲ್ಲಿ ಅನುಮತಿ ಪಡೆಯಲಾಗುವುದು ಎಂದರು. ಜೊಯಿಡಾ ತಾಲೂಕು ಅನಮೋಡ್​ನಲ್ಲಿ 110 ಕೆ. ವಿ. ಸಾಮರ್ಥ್ಯದ ವಿದ್ಯುತ್ ಗ್ರಿಡ್ ಇದ್ದು, ಹಳೆಯದಾದ ಸ್ಥಿತಿಯಲ್ಲಿದೆ. ಹೊಸ ಯಂತ್ರಗಳನ್ನು ಅಳವಡಿಸಲು ಮುಖ್ಯ ಕಚೇರಿಗೆ ವಿನಂತಿಸಲಾಗಿದೆ’ ಎಂದರು. ಜಿಲ್ಲಾಧಿಕಾರಿ ಎಸ್. ಎಸ್. ನಕುಲ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಇತರರಿದ್ದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಜಿಲ್ಲಾ ಕಾಂಗ್ರೆಸ್ ಸಿದ್ಧತೆ ನಡೆಸಿದ್ದು, ನಾವು ತಾಲೂಕುಗಳಲ್ಲಿ ಗೆಲುವು ಸಾಧಿಸುತ್ತೇವೆ. ಲೋಕಸಭೆ, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿಷಯಗಳು ಬೇರೆ ಬೇರೆಯಾಗಿರುತ್ತದೆ. ಇಲ್ಲಿ ಸ್ಥಳೀಯ ವಿಷಯ ಮಹತ್ವದ್ದಾಗಿರುತ್ತದೆ’ ಎಂದು ಆರ್.ವಿ. ದೇಶಪಾಂಡೆ ಹೇಳಿದರು. ಗೋಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕನ್ನಡ ನಾಡನ್ನು ಒಡೆಯುವ ಬಗೆಗೆ ಯಾರೂ ಮಾತನಾಡಬಾರದು. ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಮಾತನಾಡಲಿ. ಅದು ಅವರ ಹಕ್ಕು. ಸರ್ಕಾರ ಅಭಿವೃದ್ಧಿ ಮಾಡಲು ತಯಾರಿದೆ. ಕರಾವಳಿ, ಹಳೇ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕ ಹೀಗೆ ಎಲ್ಲ ಭಾಗದಲ್ಲೂ ಅಭಿವೃದ್ಧಿ ಆಗಬೇಕು. ಈ ಬಗೆಗೆ ಲಕ್ಷ್ಯ ವಹಿಸಲು ನಾವು ಸಿದ್ಧರಿದ್ದೇವೆ ಎಂದರು. ರಾಜ್ಯದಲ್ಲಿ ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ವಿರೋಧ ಪಕ್ಷದ ಪ್ರಮುಖ ಕೋಟ ಶ್ರೀನಿವಾಸ ಪೂಜಾರಿ ಆರೋಪಕ್ಕೆ ಉತ್ತರಿಸಿದ ದೇಶಪಾಂಡೆ, ‘ಕೆಲಸಗಳು ಆದರೂ ಆಗಿಲ್ಲ ಎನ್ನುವುದು ವಿರೋಧ ಪಕ್ಷದವರ ಕೆಲಸ. ಅವರ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ. ಅತಿವೃಷ್ಟಿಯಿಂದ ಸಮಸ್ಯೆ ಆಗಿದ್ದು, ಪರಿಹಾರಕ್ಕಾಗಿ ಪ್ರತಿ ಜಿಲ್ಲೆಗೆ 5 ಕೋಟಿ ರೂ. ಹಣ ಮೀಸಲು ಇಟ್ಟಿದ್ದೇವೆ’ ಎಂದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಇತರರಿದ್ದರು.

ಯುವಕರಿಗೆ ಆದ್ಯತೆ

ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಆರ್.ವಿ. ದೇಶಪಾಂಡೆ, ಕಾಂಗ್ರೆಸ್ ಪಕ್ಷದ ಬಲವರ್ಧನೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನಮ್ಮ ಪಕ್ಷದಲ್ಲಿ ಯುವಕರ ಕೊರತೆ ಕಾಣುತ್ತಿದೆ. ಯುವಕರನ್ನು ಹೆಚ್ಚು ಹೆಚ್ಚು ಪಕ್ಷಕ್ಕೆ ಸೆಳೆಯುವ ಕೆಲಸ ಆಗಬೇಕಿದೆ. ಸ್ಥಳೀಯ ಸಂಸ್ಥೆ ಚುನಾವಣೆ ಎದುರಿಸಲು ಸಮರ್ಥರನ್ನೇ ಕಣಕ್ಕಿಳಿಸಬೇಕು. ಈ ಕುರಿತು ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದರು.

ಇಂದಿರಾ ಕ್ಯಾಂಟೀನ್ ಪರಿಶೀಲನೆ

ಹಳಿಯಾಳ: ಕೂಲಿಕಾರ್ವಿುಕರ, ಬಡವರ ಹಸಿವು ನಿವಾರಿಸಿ ಅವರು ಉತ್ಸಾಹ ಸ್ಥೈರ್ಯದಿಂದ ದೈನಂದಿನ ಬದುಕು ಕಟ್ಟಲು ಅಣಿಯಾಗಿಸುವಂತಹ ಪವಿತ್ರ ಕಾರ್ಯವನ್ನು ಇಂದಿರಾ ಕ್ಯಾಂಟೀನ್ ಯೋಜನೆ ಆರಂಭಿಸುವ ಮೂಲಕ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.

ಲೋಕೋಪಯೋಗಿ ಕಚೇರಿ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್​ಗೆ ಭೇಟಿ ನೀಡಿ ಕಾರ್ಯವನ್ನು ವೀಕ್ಷಿಸಿ ಮಾತನಾಡಿದರು. ಕ್ಯಾಂಟೀನ್ ಸಿಬ್ಬಂದಿಯೊಂದಿಗೆ ಮಾಹಿತಿ ಕಲೆ ಹಾಕಿದ ಸಚಿವರು, ಸಿದ್ಧಪಡಿಸುವ ಆಹಾರ, ಕ್ಯಾಂಟೀನ್​ನಲ್ಲಿ ಆಗಬೇಕಾದ ಕಾರ್ಯಗಳ ಕುರಿತು ವಿಚಾರಿಸಿದರು. ಬೆಳಗಿನ ಉಪಾಹಾರ ಸೇವಿಸಲು ಆಗಮಿಸಿದ ಶಾಲಾ- ಕಾಲೇಜ್ ಮಕ್ಕಳೊಂದಿಗೆ ಸಂವಾದ ನಡೆಸಿದರು. ಸ್ಥಳೀಯ ಆಹಾರ ಪದ್ಧತಿಯಂತೆ ಬೆಳಗ್ಗಿನ ಉಪಾಹಾರವನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಸತ್ಯಜಿತ್ ಗಿರಿ, ಮಾಲಾ ಬೃಗಾಂಜಾ, ಕೇಶವ ಚೌಗಲೆ, ಪ್ರಕಾಶ ಪ್ರಭು ಇದ್ದರು.