ಮಾರುಕಟ್ಟೆಯಲ್ಲಿ ನೂರೆಂಟು ಸಮಸ್ಯೆ

ಹಿರೇಕೆರೂರ: ಪಟ್ಟಣದ ಶ್ರೀ ದುರ್ಗಾದೇವಿ ಸಂತೆ ಮೈದಾನವು ಅವ್ಯವಸ್ಥೆಯ ತಾಣವಾಗಿದೆ. ಸೋಮವಾರಕ್ಕೊಮ್ಮೆ ನಡೆಯುವ ಸಂತೆಗೆ ಆಗಮಿಸುವ ಗ್ರಾಹಕರು ಹಾಗೂ ವ್ಯಾಪಾರಸ್ಥರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ಈ ಮೊದಲು ಬಸವನ ಬೀದಿಯಲ್ಲಿ ನಡೆಯುತ್ತಿದ್ದ ಸಂತೆಯನ್ನು ಸ್ಥಳದ ಕೊರತೆ ಹಾಗೂ ವಾಹನ ದಟ್ಟಣೆ ಹೆಚ್ಚಾದ ಕಾರಣ ಸ್ಥಳಾಂತರಿಸಲಾಯಿತು. ಅಂದಿನ ಶಾಸಕ ಬಿ.ಎಚ್.ಬನ್ನಿಕೋಡ ಅವರು ಪಟ್ಟಣ ಪಂಚಾಯಿತಿ ಸದಸ್ಯರ ಸಹಕಾರದಿಂದ 1999-2000ರಲ್ಲಿ ಸುಣ್ಣದ ಕಾಲುವೆಗೆ ಹೊಂದಿಕೊಂಡಿದ್ದ ಸುಮಾರು 8 ಎಕರೆಗಿಂತ ಹೆಚ್ಚಿನ ಪ್ರದೇಶದಲ್ಲಿದ್ದ ಹೊಂಡವನ್ನು ಮುಚ್ಚಿಸಿ ಶ್ರೀ ದುರ್ಗಾದೇವಿ ಸಂತೆ ಮೈದಾನವನ್ನಾಗಿ ಪರಿವರ್ತಿಸಿದ್ದರು.

ಆದರೆ, ಅಧಿಕಾರಿಗಳು ನೆಪಕ್ಕೆ ಎಂಬಂತೆ ಅಲ್ಪ ಸ್ವಲ್ಪ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡು, ಮಣ್ಣು ಹಾಕಿಸಿ ರಸ್ತೆ ಮಾಡಿಸಿದ್ದಾರೆ. ಅದು ತಾತ್ಕಾಲಿಕ ಕೆಲಸವಾಗಿದ್ದು, ಯಾವ ಪ್ರಯೋಜನವೂ ಆಗುತ್ತಿಲ್ಲ.

ರಸ್ತೆಯಿಂದ 6 ಅಡಿ ತಗ್ಗು ಪ್ರದೇಶದಲ್ಲಿರುವ ಸಂತೆ ಮೈದಾನದಲ್ಲಿ ಮಳೆಗಾಲದಲ್ಲಿ ನೀರು ನುಗ್ಗುತ್ತದೆ. ಆದರೆ, ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ, ಅಪಾರ ಪ್ರಮಾಣದ ನೀರು ಮಾರುಕಟ್ಟೆ ಪ್ರದೇಶದಲ್ಲಿ ಸಂಗ್ರಹವಾಗುತ್ತದೆ. ಈ ವೇಳೆ ಮಾರಲು ತಂದೆ ತರಕಾರಿಗಳು ಒದ್ದೆಯಾಗಿ ಹಾಳಾಗುತ್ತವೆ. ಇದರಿಂದ ವ್ಯಾಪಾರಸ್ಥರು ಭಾರಿ ನಷ್ಟ ಅನುಭವಿಸುವಂತಾಗಿದೆ.

ಈಗಾಗಲೆ ಈ ಸಂತೆ ಮೈದಾನದಲ್ಲಿ ಲೈಬ್ರರಿ, ರಂಗಮಂದಿರ, ಅಂಗನವಾಡಿ ಕೇಂದ್ರ, ಸ್ತ್ರೀ ಶಕ್ತಿ ಭವನ ಹಾಗೂ ವಾಣಿಜ್ಯ ಮಳಿಗೆಗಳನ್ನು ನಿರ್ವಿುಸಲಾಗಿದೆ. ಇದರಿಂದ ಸ್ಥಳದ ಕೊರತೆಯಾಗಿ ವ್ಯಾಪಾರಸ್ಥರು ರಸ್ತೆ ನಡುವೆ ಅಂಗಡಿಗಳನ್ನು ಹಚ್ಚುವುದರಿಂದ ಗ್ರಾಹಕರಿಗೆ ಅದರಲ್ಲೂ ಮಹಿಳೆಯರಿಗೆ ಓಡಾಡಲು ಇರಿಸು ಮುರಿಸು ಉಂಟಾಗುತ್ತಿದೆ.

ಶೌಚಗೃಹ, ರ್ಪಾಂಗ್, ಪ್ರತ್ಯೇಕ ಮಾಂಸ ಮಾರುಕಟ್ಟೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲಿಲ್ಲ. ಕಾಂಪೌಂಡ್ ನಿರ್ಮಾಣ ಮಾಡಿಲ್ಲ. ಇದರಿಂದಾಗಿ ದನಕರುಗಳು, ಹಂದಿಗಳು ಸಂತೆ ನಡೆಯುವ ಸಂದರ್ಭದಲ್ಲಿ ತರಕಾರಿ ತಿನ್ನಲು ನುಗ್ಗುವುದಲ್ಲದೆ, ಸಾರ್ವಜನಿಕರ ಮೇಲೂ ದಾಳಿ ಮಾಡುತ್ತವೆ. ಹೀಗಾಗಿ, ವ್ಯಾಪಾರಸ್ಥರು, ಗ್ರಾಹಕರು ಮಾರುಕಟ್ಟೆಗೆ ಆಗಮಿಸಲು ಹೆದರುವಂತಾಗಿದೆ.

ಇಲ್ಲಿನ ಸಂತೆಗೆ ಸುತ್ತಮುತ್ತಲಿನ ಸಣ್ಣ ಮತ್ತು ಅತಿ ದೊಡ್ಡ ವ್ಯಾಪಾರಸ್ಥರು, ರೈತರು ತಾವು ಬೆಳೆದ ತರಕಾರಿ, ಬೇಳೆ, ಹಣ್ಣುಗಳನ್ನು ಮಾರಾಟ ಮಾಡಲು ಬರುತ್ತಾರೆ. ಇಲ್ಲಿ ರೈತರಿಂದ ಖರೀದಿಸಿದ ತರಕಾರಿ, ಕಾಳು ಕಡಿಗಳು ಆನವಟ್ಟಿ, ಶಿರಾಳಕೊಪ್ಪ, ಶಿಕಾರಿಪುರ, ಸೊರಬ, ಸಿದ್ದಾಪುರ, ಶಿರಸಿ, ಕಾರವಾರ, ಭಟ್ಕಳ ಹಾಗೂ ವಿವಿಧ ಮಹಾನಗರಗಳಿಗೆ ಪೂರೈಕೆಯಾಗುತ್ತವೆ.

ಮಾರುಕಟ್ಟೆಯಲ್ಲಿನ ರಸ್ತೆಗಳನ್ನು ಕಾಂಕ್ರೀಟ್ ಮಾಡುವುದು ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಹಲವು ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ, ವಾರಕ್ಕೊಮ್ಮೆ ಐದಾರು ಸಾವಿರ ರೂ. ತೆರಿಗೆ ಸಂಗ್ರಹಿಸುವ ಗುತ್ತಿಗೆದಾರರು ಇದಾವುದರ ಬಗ್ಗೆಯೂ ಗಮನಹರಿಸುತ್ತಿಲ್ಲ. ಪ.ಪಂ. ಅಧಿಕಾರಿಗಳು ಮಳೆಗಾಲ ಆರಂಭವಾಗುವುದರೊಳಗೆ ಸಂತೆ ಮಾರುಕಟ್ಟೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು, ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.

ಸಂತೆ ಮೈದಾನ ಅಭಿವೃದ್ಧಿಗಾಗಿ ಶಾಸಕ ಬಿ.ಸಿ.ಪಾಟೀಲ ಅವರು ಈಗಾಗಲೇ ಸರ್ಕಾರಕ್ಕೆ 5 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದಾರೆ. ಮೈದಾನದ ಅಭಿವೃದ್ಧಿಗಾಗಿ ಅಂದಾಜು ಪತ್ರಿಕೆ ತಯಾರಿಸುತ್ತಿದ್ದು, ಇದನ್ನು ಸರ್ಕಾರಕ್ಕೆ ಕಳುಹಿಸಿದ ನಂತರ ಆ ಹಣ ಬಿಡುಗಡೆಯಾಗಲಿದೆ. ನಂತರ ಶಾಸಕರ ಸೂಚನೆಯಂತೆ ಅಭಿವೃದ್ಧಿ ಕಾರ್ಯ ಮಾಡಲಾಗುವುದು.
| ರಾಜಾರಾಮ್ ಪವಾರ, ಪ.ಪಂ. ಮುಖ್ಯಾಧಿಕಾರಿ