ಮಾರುಕಟ್ಟೆಯಲ್ಲಿ ಜನಜಂಗುಳಿ

ಶಿವಮೊಗ್ಗ: ಯುಗಾದಿ ಮುನ್ನ ದಿನವಾದ ಶುಕ್ರವಾರ ಜಿಲ್ಲಾದ್ಯಂತ ಹಬ್ಬದ ಸಿದ್ಧತೆ ಜೋರಾಗಿತ್ತು. ನಗರದ ಪ್ರಮುಖ ವಾಣಿಜ್ಯ ವಹಿವಾಟು ಕೇಂದ್ರವಾಗಿರುವ ಗಾಂಧಿ ಬಜಾರ್, ನೆಹರು ರಸ್ತೆ ಮುಂತಾದ ಭಾಗಗಳಲ್ಲಿ ಜನರು ಹಬ್ಬಕ್ಕಾಗಿ ಹೊಸ ಬಟ್ಟೆ ಖರೀದಿ, ದಿನಸಿ ಖರೀದಿಯಲ್ಲಿ ತೊಡಗಿದ್ದು ಕಂಡುಬಂತು.

ನಗರದ ಶಿವಪ್ಪನಾಯಕ ಹೂವಿನ ಮಾರುಕಟ್ಟೆಯಲ್ಲಿ ಹೂವಿನ ಖರೀದಿಗೆ ನಾಗರಿಕರು ಮುಂದಾಗಿದ್ದರು. ಅಲ್ಲದೆ ನೆಹರು ರಸ್ತೆ, ಬಿಎಚ್ ರಸ್ತೆ, ದುರ್ಗಿಗುಡಿ, ಗೋಪಿ ವೃತ್ತ, ಸವಳಂಗ ರಸ್ತೆ ಮುಂತಾದ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಜನಜಂಗುಳಿ ಕಂಡುಬಂತು.

ಪ್ರಮುಖ ವೃತ್ತಗಳಲ್ಲಿ ಮಾವು, ಕಹಿಬೇವು, ಬಾಳೆ ಕಂದು, ಹಣ್ಣು ಮುಂತಾದ ವಸ್ತುಗಳ ಖರೀದಿ ಪ್ರಕ್ರಿಯೆ ನಡೆಯಿತು. ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು, ತರಕಾರಿ ಬೆಲೆಯಲ್ಲಿ ತುಸು ಏರಿಕೆ ಕಂಡುಬಂದಿದೆ. ಸೇವಂತಿಗೆ, ಮಲ್ಲಿಗೆ ಹೂ ಮಾರೊಂದಕ್ಕೆ 60-80 ರೂ.ಗಳಿಗೆ ಮಾರಾಟವಾಗುತ್ತಿದೆ. ದ್ರಾಕ್ಷಿ 60-80ರೂ, ಕಿತ್ತಳೆ 50 ರೂ ಏರಿಕೆಯಾಗಿದೆ. ಕಲ್ಲಂಗಡಿ, ಬನಾಸ್​ಪತ್ರೆ ಹಣ್ಣುಗಳ ಮಾರಾಟ ಕೂಡ ಬಲು ಜೋರಾಗಿತ್ತು.

ಬೇಸಿಗೆ ಹಾಗೂ ಹಬ್ಬದ ಎಫೆಕ್ಟ್​ನಿಂದ ತರಕಾರಿ ಬೆಲೆ ಕೂಡ ಏರಿಕೆಯಾಗಿದೆ. ಬೀನ್ಸ್ 120 ರೂ, ಕ್ಯಾರೇಟ್ 40 ರೂ., ಮೂಲಂಗಿ 20 ರೂ., ಬೆಂಡೆಕಾಯಿ 30 ರೂ. ಗ್ರಾಮೀಣ ಭಾಗದಲ್ಲೂ ಹಬ್ಬದ ವಾತಾವರಣ ಕಂಡು ಬರತೊಡಗಿದೆ. ಗ್ರಾಮೀಣ ಪ್ರದೇಶದ ಜನ ಹಬ್ಬದ ಖರೀದಿಗೆಂದು ನಗರಕ್ಕೆ ಆಗಮಿಸಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ಊರಿಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.