ಶಿರಸಿ: ಮಾರಿಕಾಂಬಾ ದೇವಿ ಕಲ್ಯಾಣಿಯಾಗಿ ಜಾತ್ರಾ ಗದ್ದುಗೆಗೆ ಆಗಮಿಸಲು ಬಳಸುವ ರಥದ ಸಿದ್ಧತೆಗೆ ಅಗತ್ಯವಾದ ಮರದ ದಿಮ್ಮಿಗಳನ್ನು ಮಂಗಳವಾರ ಸಂಪ್ರದಾಯದಂತೆ ಚಕ್ಕಡಿ ಗಾಡಿಯಲ್ಲಿ ತಂದು ಪೂಜಿಸಲಾಯಿತು. ಮಾರಿಕಾಂಬಾ ದೇವಿ ರಥಾರೂಢಳಾಗಿ ಜಾತ್ರಾ ಗದ್ದುಗೆಗೆ ಆಗಮಿಸಲಿದ್ದು, ಅದಕ್ಕಾಗಿ ರಥ ಸಜ್ಜುಗೊಳಿಸಬೇಕಾಗಿದೆ. 4 ಚಕ್ಕಡಿ ಗಾಡಿಗಳು ಮತ್ತು 2 ಬಂಡಿಗಳ ಮೂಲಕ ಬಿಕ್ಕನಳ್ಳಿ ಸಮೀಪದ ಮಾಲ್ಕಿ ಪ್ರದೇಶದಿಂದ ತಾರಿ ಮರವನ್ನು ಎತ್ತುಗಳು ಚಕ್ಕಡಿಯಲ್ಲಿ ಸಾಗಾಟ ಮಾಡಿದವು.
ಸೋಮವಾರ ಸಂಜೆ ಕೋಟೆಕೆರೆ ಬಳಿ ಇವುಗಳನ್ನು ತರಲಾಗಿತ್ತು. ಮಂಗಳವಾರ ಬೆಳಗ್ಗೆ ದಿಮ್ಮಿಗಳಿಗೆ ಪ್ರಧಾನ ಅರ್ಚಕರು ಪೂಜೆ ಸಲ್ಲಿಸಿದರು. ಬಳಿಕ ದಿಮ್ಮಿಗಳನ್ನು ದೇವಸ್ಥಾನದ ಬಳಿ ತಂದು ರಥ ನಿರ್ವಣಕ್ಕಾಗಿ ಒಯ್ಯಲಾಯಿತು. ಈ ವೇಳೆ ದಿಮ್ಮಿಗಳನ್ನು ಹೊತ್ತು ತಂದ ಎತ್ತುಗಳನ್ನು ಸಿಂಗರಿಸಲಾಗಿತ್ತು. ಅದರಂತೆ ಎತ್ತಿನ ಗಾಡಿಗಳಿಗೆ ಸಂಪ್ರದಾಯದಂತೆ ಬಾಳೆಕಂಬ, ಬಲೂನುಗಳನ್ನು ಕಟ್ಟಿ ಸಿಂಗರಿಸಲಾಗಿತ್ತು. ಸೀಮಾ ರೈತರು, ಬಾಬದಾರರು, ಧರ್ಮದರ್ಶಿ ಮಂಡಳಿಯವರು ಹಾಜರಿದ್ದರು.
ದೇವಿಯ ವಿಗ್ರಹ ವಿಸರ್ಜನೆ ಇಂದು: ಮಂಗಳವಾರ ರಾತ್ರಿ ಪೂರ್ವ ದಿಕ್ಕಿಗೆ ಅಂಕೆಯ ಹಾಗೂ ಕೊನೆಯ ಹೊರಬೀಡು ನಡೆಯುತ್ತಿದೆ. ಈ ಸಂದರ್ಭದಲ್ಲಿ ಜಾತ್ರಾ ಗದ್ದುಗೆಗೆ ತೆರಳಿದ ಪಲ್ಲಕ್ಕಿ ಫೆ.26ರ ಮಧ್ಯಾಹ್ನದ ಹೊತ್ತಿಗೆ ದೇವಸ್ಥಾನಕ್ಕೆ ಆಗಮಿಸಲಿದೆ. ನಂತರ ದೇವಿಯ ವಿಗ್ರಹ ವಿಸರ್ಜನೆ ಮಾಡಲಾಗುತ್ತದೆ. ಗರ್ಭಗುಡಿಯಲ್ಲಿ ದೇವಿಯ ದರ್ಶನ ಯುಗಾದಿಯ ನಂತರ ಭಕ್ತರಿಗೆ ದೊರೆಯಲಿದೆ.