ಮಾರಿಕಾಂಬಾ ದೇವಸ್ಥಾನದಲ್ಲಿ ಕಳ್ಳತನ

ಸಿದ್ದಾಪುರ: ಪಟ್ಟಣದ ಹಾಳದಕಟ್ಟಾ ಮಾರಿಕಾಂಬಾ ದೇವಸ್ಥಾನದಲ್ಲಿ ದೇವಿಯ ಮೈಮೇಲಿನ 1.80 ಲಕ್ಷ ರೂ. ಚಿನ್ನ ಹಾಗೂ ಬೆಳ್ಳಿ (62 ಗ್ರಾಂ ಚಿನ್ನ ಹಾಗೂ 1.29 ಕೆ.ಜಿ.ಬೆಳ್ಳಿ) ಆಭರಣವನ್ನು ಕಳ್ಳರು ದೋಚಿದ್ದಾರೆ.

ಶನಿವಾರ ರಾತ್ರಿ ದೇವಾಲಯದ ಹಿಂದಿನ ಬಾಗಿಲನ್ನು ರಾಡ್​ನಿಂದ ಮುರಿದು ಗರ್ಭಗುಡಿಯ ಶೆಟರ್ ಚಾವಿಯನ್ನು ಮೀಟಿ ತೆಗೆದು ದೇವಿಯ ಮೈಮೇಲಿದ್ದ ಮೂರು ಎಳೆಯ ಕರಿಮಣಿ ಸರ, ಚಿನ್ನದ ಬೋರಿಗುಂಡಿನ ಸರ, ಅಡ್ಡ ತಿಲಕ, ಚಿನ್ನದ ಗೋಲು ತಿಲಕ, ಸೂತ್ರದ ಚಿನ್ನದ ತಾಳಿ, ಚಿನ್ನದ ಕರಿಮಣಿ ಸರ, ಅರ್ಧ ಕೆಜಿ ಬೆಳ್ಳಿ ಗದೆ, ಬೆಳ್ಳಿ ಡಾಬು, ಬೆಳ್ಳಿ ಕಾಲಿನ ಚೈನು, ಬೆಳ್ಳಿ ಕೈಕಡಗ, ಪೂಜಾ ಮೂರ್ತಿಯ ಕೊರಳಿನಲ್ಲಿದ್ದ ಚಿನ್ನದ ಮಂಗಳಸೂತ್ರವನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಶಿರಸಿ ಎಎಸ್​ಪಿ ನಾಗೇಶ ಡಿ.ಎಲ್, ಸಿದ್ದಾಪುರ ಸಿಪಿಐ ಜಾಯ್ ಅಂತೋನಿ ಹಾಗೂ ಸಿಬ್ಬಂದಿ, ಶ್ವಾನ ದಳ, ಬೆರಳಚ್ಚುಗಾರರು ಸ್ಥಳ ಪರಿಶೀಲಿಸಿದ್ದಾರೆ.

ಅದೇ ರೀತಿ ಹಾಳದಕಟ್ಟಾ ಭದ್ರಕಾಳಿ ದೇವಸ್ಥಾನದ ಬಾಗಿಲು ಮುರಿದು ದೇವಿಯ ಮೈಮೇಲಿದ್ದ ಚಿನ್ನದ ಸರ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.