ಮಾಯಾ ನಿರಸನ

ಮಹಲಿಂಗರಂಗನು ಮಾಯೆಯ ನಿರಸನವನ್ನು ಕುರಿತು ಇಲ್ಲಿ ಚಿಂತಿಸುತ್ತಿದ್ದಾನೆ. ಮಾಯೆಯು ಜಗತ್ತಿಗೆ ಉಪಾದಾನ ಕಾರಣವೆಂದು ಶಾಸ್ತ್ರಗಳು ಹೇಳುತ್ತವೆ. ಇದು ವಿಕ್ಷೇಪ ಶಕ್ತಿಯುಳ್ಳದ್ದು. ಮಾಯೆ ಎಂಬುದಕ್ಕೆ ಅವಿದ್ಯೆ, ಅವ್ಯಕ್ತ, ಮಿಥ್ಯಾಜ್ಞಾನ ಮತ್ತು ಭ್ರಾಂತಿ ಎಂಬ ಸಮಾನಪದಗಳಿವೆ.

ಈ ಮಾಯೆಯು ಸತ್ವ, ರಜ ಮತ್ತು ತಮೋಮಯ ಗುಣಗಳನ್ನು ಹೊಂದಿದೆ. ಹೀಗಾಗಿ, ಪ್ರತಿಯೊಬ್ಬ ಜೀವಿಯು ಈ ಮೂರು ಗುಣಗಳಿಂದ ಉಂಟಾಗುವ ರಾಗ, ದ್ವೇಷ ಮತ್ತು ಮೋಹವೇ ಮೊದಲಾದವುಗಳಿಂದ ವಿವೇಕವನ್ನು ಕಳೆದುಕೊಳ್ಳುತ್ತಾರೆ. ಹೀಗಾದಾಗ, ಅವರು ತಮ್ಮ ಸ್ವಸ್ವರೂಪವನ್ನು ಅರಿತುಕೊಳ್ಳಲು ಅಸಮರ್ಥರಾಗಿಬಿಡುತ್ತಾರೆ. ಇದರಿಂದ ಬಿಡುಗಡೆಗೊಳ್ಳಬೇಕಾದರೆ ಗೀತೆಯಲ್ಲಿ ಹೇಳಿರುವ ಹಾಗೆ ‘ಪರಮಾತ್ಮನೇ ಆತ್ಮ’ ಎಂದು ಅರಿತುಕೊಳ್ಳಬೇಕಾಗುತ್ತದೆ. ಅಂಥವರು ಮಾಯೆಯನ್ನು ಸುಲಭವಾಗಿ ದಾಟುತ್ತಾರೆ. ಮಾಯೆಯು ಯಾರನ್ನೂ ಬಿಟ್ಟಿಲ್ಲ. ಸೃಷ್ಟಿಕರ್ತನಾದ ಬ್ರಹ್ಮನೇ ಇದಕ್ಕೆ ಮೋಹಿತನಾಗಿದ್ದಾನೆಂದರೆ ಇದರ ಪ್ರಾಬಲ್ಯವನ್ನು ಮನಗಾಣಬಹುದು. ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು

ಈ ಮುಂದಿನ ಪದ್ಯಗಳನ್ನು ಅರ್ಥಮಾಡಿಕೊಳ್ಳುವುದು ಅವಶ್ಯ.

ನಮಗೆಲ್ಲ ತಿಳಿದಿರುವಂತೆ ಈ ಮಾಯೆಗೆ ಆವರಣ ಮತ್ತು ವಿಕ್ಷೇಪಗಳೆಂಬ ಶಕ್ತಿಗಳುಂಟಷ್ಟೆ. ಈ ಆವರಣವು ಬ್ರಹ್ಮವನ್ನು ಮರೆಮಾಡಿದೆ. ಆದರೆ, ವಿಕ್ಷೇಪಶಕ್ತಿಯು ಜಗತ್ತನ್ನು ಮತ್ತು ಜೀವರನ್ನು ಕಾಣುವಂತೆ ಮಾಡುತ್ತಿದೆ. ಈ ಮಾಯೆಯು ನಾಶವಾಗುವುದರಿಂದ ಇದು ಸದ್ರೂಪವಲ್ಲ. ಕಾರ್ಯವನ್ನು ಉಂಟುಮಾಡುವುದರಿಂದ ಇದು ಅಸದ್ರೂಪವೂ ಅಲ್ಲ. ಈ ಸಂಗತಿಗಳನ್ನು ಮುಂದಿನ ಪದ್ಯಗಳಲ್ಲಿ ಮಹಲಿಂಗರಂಗನು ಕಾವ್ಯರೂಪಕದಿಂದಲೇ ವ್ಯಕ್ತಗೊಳಿಸುತ್ತಾನೆ. ವೇದಾಂತದಲ್ಲಿ ಪಂಚಕೋಶಗಳ ವಿವರಣೆ ಬರುವುದು ಸರಿಯಷ್ಟೆ. ಇದು ಸೂಕ್ಷ್ಮ ಮತ್ತು ಸ್ಥೂಲರೂಪವಾಗಿ ನಮ್ಮ ಶರೀರದಲ್ಲಿ ಅಡಗಿರುತ್ತದೆ. ಈ ಮೊದಲು ಹೇಳಿದಂತೆ ಸತ್ವ, ರಜ ಮತ್ತು ತಮಸ್ಸಿನಿಂದ ಕೂಡಿದುದನ್ನು ಇಲ್ಲಿ ಗಮನಿಸ ಬೇಕಾಗುತ್ತದೆ. ಹಾಗೆ ನೋಡಿದರೆ ಇವು ಕರ್ತೃ, ಕರ್ಮ, ಕ್ರಿಯೆಗಳಾಗಿ ಪ್ರವರ್ತಿಸುತ್ತಿರುವುದು ದಿಟ. ಮಹಲಿಂಗರಂಗನು ಹೇಳುವ ಈ ಪದ್ಯವನ್ನು ಈ ದೃಷ್ಟಿಯಿಂದ ಪರಾಂಬರಿಸಬೇಕು.

ಪುತ್ರ ಕೇಳೈ ಕೋಶಪಂಚಕ

ತತ್ತ್ವಮಯವಾಗಿಪ್ಪುದದು ತಾ

ನಿತ್ತೆರದ ತನುಗಳಲಿ ಸೂಕ್ಷ್ಮಸ್ಥೂಲವೆಂದೆನಿಸಿ; |

ಸತ್ತ್ವರಜತಮವಾದಹಂಕೃತಿ

ವೃತ್ತಿಯೆಲ್ಲವ ತಿಳಿದು ನೋಡಲು

ಕರ್ತೃಕರ್ಮ ಕ್ರಿಯೆಗಳಾಗಿ ಪ್ರವರ್ತಿಸುತ್ತಿಹವು || 4.32 ||

ಈ ಪದ್ಯದಲ್ಲಿ ಎರಡು ವಿಷಯಗಳಿವೆ. ಮೊದಲನೆಯದು – ಕೋಶಪಂಚಕ ತತ್ತ್ವಮಯವಾಗಿಪು್ಪದು, ಎರಡನೆಯದು – ಅದು ತಾನಿತ್ತೆರದ ತನುಗಳಲಿ ಸೂಕ್ಷ್ಮಸ್ಥೂಲವೆಂದೆನಿಸಿ. ಕೋಶಪಂಚಕವೆಂದರೆ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯಗಳೆಂಬುದು ಪ್ರಸಿದ್ಧ. ಇವು ವೇದಾಂತದಲ್ಲಿ ಬರುವ ಪಂಚಕೋಶಗಳು. ಈ ಪಂಚಕೋಶವು ತತ್ತ್ವಮಯವಾಗಿವೆ. ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಎರಡನೆಯ ಸಂಗತಿಯನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಪದ್ಯದ ಉತ್ತರಾರ್ಧದಲ್ಲಿ ‘ಅಹಂಕೃತಿ ವೃತ್ತಿ’ ಎಂದು ಹೇಳಿದೆ. ಇದಕ್ಕೆ ಅಹಂಕಾರದ ವೃತ್ತಿಗಳೆಂದೇ ಅರ್ಥ. ಸಾಧಕನಾದವನು ಮೊದಲು ಕೋಶಪಂಚಕಗಳ ತಿಳಿವಳಿಕೆಯನ್ನು ಪಡೆದಿರಬೇಕು. ಅದರ ಸ್ವರೂಪಭೇದವನ್ನು ತಿಳಿಯದೆ ಅವನು ಮುಂದಕ್ಕೆ ಹೋಗಲಾರ. ಪ್ರತಿಯೊಬ್ಬ ಸಾಧಕನು ಸತ್ವ, ರಜ ಮತ್ತು ತಮದ ಅಹಂಕೃತಿಗಳ ಹೊದಿಕೆಯಲ್ಲಿ ಮುಳುಗಿಯೇ ಇರುತ್ತಾನೆ. ಅವನು ತಮವನ್ನು ಕಳೆದುಕೊಳ್ಳದೆ ರಜೋಸ್ಥಿತಿಗೆ ಏರಲಾರ. ತಮ ಮತ್ತು ರಜಗಳು ನಿರಸನಗೊಂಡಾಗ ಮಾತ್ರ ಸತ್ವವು ಸಾಧಕನಲ್ಲಿ ತಲೆದೋರಲು ಸಾಧ್ಯ. ಹೀಗಾಗಿ, ಸತ್ವ, ರಜ ಮತ್ತು ತಮೋಗುಣಗಳು ಸಾಧಕನ ಸೂಕ್ಷ್ಮಶರೀರದಲ್ಲಿಯೂ ಇರುತ್ತವೆ ಮತ್ತು ಸ್ಥೂಲರೂಪವಾಗಿಯೂ ಇರುತ್ತವೆ. ಈ ಹಿನ್ನೆಲೆಯಲ್ಲಿ ಸತ್ವ, ರಜ ಮತ್ತು ತಮಗಳು ಕರ್ತೃಗಳಾಗಿಯೂ ಕರ್ಮಗಳಾಗಿಯೂ ಕ್ರಿಯೆಗಳಾಗಿಯೂ ಪ್ರವರ್ತಿಸುತ್ತಿರುವುದು ದಿಟದ ಸಂಗತಿಯೆ.

ಮಹಲಿಂಗರಂಗನು ಕೋಶಪಂಚಕಗಳ ವಿವರವನ್ನು ಹೇಳಿದ ಮೇಲೆ ಮಾಯೆಯು ಆವರಿಸುವ ಸ್ವರೂಪವನ್ನು ಕಾವ್ಯರೂಪಕದ ಮೂಲಕ ‘ಮಾಯಾವಿಲಾಸಸ್ವರೂಪ’ವನ್ನು ಇಲ್ಲಿ ತಿಳಿಸುತ್ತಿದ್ದಾನೆ.

ಸದಮಲಾನಂದೈಕರಸವನು

ಪೊದೆದು, ತಾನೇ ನಾಮರೂಪೆಂ

ಬುದ ತಳೆದು, ಬ್ರಹ್ಮಾಂಡತಂಡದಿ ಹಬ್ಬಿ ಪಸರಿಸುತ, |

ಬುದುಬುದಾಕಾರದಲಿ ತೋರುವ

ದದು ಕಣಾ ಮಾಯಾವಿಲಾಸವು;

ವಿಧಿಹರಿಹರಾದಿಗಳಿದನು ಬಗೆಯದೆಯೆ ಮೋಹಿಪರು || 4.33 ||

ಈ ಪದ್ಯದ ಸಾರಾರ್ಥ ಇಷ್ಟು. ಈ ಮಾಯಾವಿಲಾಸವು ತಾನೇ ಆನಂದರಸವೆಂದು ಭ್ರಾಂತಿಗೆ ಒಳಪಡಿಸುತ್ತದೆ. ಮಾತ್ರವಲ್ಲ, ತಾನೇ ನಾಮರೂಪವೆಂದು ಬ್ರಹ್ಮಾಂಡದ ತುಂಬ ಹರಡಿ ಸಮುದ್ರದ ನೊರೆ ತೆರೆಯ ಹಾಗೆ ತೋರಿಸುತ್ತದೆ. ಹೀಗಾಗಿ, ಬ್ರಹ್ಮ, ವಿಷ್ಣು, ಮಹೇಶ್ವರರು ಕೂಡಾ ಮಾಯಾವಿಲಾಸದ ಭ್ರಾಂತಿಗೆ ಒಳಗಾಗಿಬಿಡುತ್ತಾರೆ.

ಮಾಯಾವಿಲಾಸದ ಭ್ರಾಂತಿ ಯಾರನ್ನೂ ಬಿಟ್ಟಿಲ್ಲವಷ್ಟೆ. ಸಾಧಕರು ಈ ಭ್ರಾಂತಿಯಿಂದ ಮುಕ್ತಗೊಳ್ಳಬೇಕು. ಭ್ರಾಂತಿಯು ಸದಮಲಾನಂದವಾಗಿ ಸಾಧಕನಿಗೆ ಒಮ್ಮೊಮ್ಮೆ ಕಾಣಿಸಿಕೊಳ್ಳಬಹುದು. ಈ ಎಚ್ಚರ ಸಾಧಕನಿಗೆ ಇರಬೇಕಾಗುತ್ತದೆ. ಹೀಗಾದಾಗ ಅದು ಅವನ ಏಳಿಗೆಗೆ ಕಾರಣೀಭೂತವಾಗಲಾರದು. ಈ ಪದ್ಯದಲ್ಲಿ ಮಹಲಿಂಗರಂಗನು ಅಧ್ಯಾತ್ಮ ಮತ್ತು ಪುರಾಣದ ವಿವರಗಳನ್ನು ಏಕತ್ರಗೊಳಿಸಿದ್ದಾನೆ.