ಮಾಮೂಲಿ ಇಲ್ಲ, ಮರಳೂ ಇಲ್ಲ!

ರಾಣೆಬೆನ್ನೂರ: ತುಂಗಭದ್ರಾ ನದಿಪಾತ್ರದಲ್ಲಿ ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಗುತ್ತಿಗೆದಾರರು ಮರಳು ಗಣಿಗಾರಿಕೆ ನಡೆಸಿದ ಪರಿಣಾಮ ಹಾಗೂ ಜಿಲ್ಲೆಯ ಪ್ರಭಾವಿ ಜನಪ್ರತಿನಿಧಿಗೆ ಮಾಮೂಲಿ ನೀಡದ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ತಾಲೂಕಿನಲ್ಲಿ ಮರಳು ವಿತರಣೆ ಸ್ಥಗಿತಗೊಳಿಸಲಾಗಿದೆ.

ಮರಳು ವಿತರಣೆ ಸ್ಥಗಿತಗೊಂಡ ಪರಿಣಾಮ ನಗರ ಸೇರಿ ತಾಲೂಕು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮರಳಿನ ಅಭಾವ ಸೃಷ್ಟಿಯಾಗಿದ್ದು, ಕಟ್ಟಡ ನಿರ್ಮಾಣ ಕಾರ್ಯಗಳು ಸ್ಥಗಿತಗೊಂಡಿವೆ. ಬಡ ಜನರು ಕೂಲಿ ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಮರಳು ಸಾಗಿಸುವ ಲಾರಿ ಮಾಲೀಕರು ಬ್ಯಾಂಕ್ ಕಂತು ಕಟ್ಟಲಾಗದೆ ಲಾರಿಗಳ ಮಾರಾಟಕ್ಕೆ ಮುಂದಾಗುತ್ತಿದ್ದಾರೆ. ಚಾಲಕರು, ಕ್ಲೀನರ್​ಗಳು ಕೆಲಸವಿಲ್ಲದೆ ಬೇರೆ ಬೇರೆ ಊರು ನೋಡಿಕೊಳ್ಳುತ್ತಿದ್ದಾರೆ.

ಆದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್, ಸ್ಥಳೀಯ ಶಾಸಕ ಆರ್. ಶಂಕರ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಥಗಿತಗೊಳಿಸಿದ್ದೇಕೆ?: ತಾಲೂಕಿನಲ್ಲಿ ಮರಳು ವಿತರಣೆಗೆ 17 ಬ್ಲಾಕ್​ಗಳನ್ನು ಗುರುತಿಸಿ ಟೆಂಡರ್ ನೀಡಲಾಗಿದೆ. ನಿಯಮದ ಪ್ರಕಾರ ನದಿಪಾತ್ರದಲ್ಲಿ ನೈಸರ್ಗಿಕವಾಗಿ ದೊರೆಯುವ ಮರಳನ್ನು ತೆಗೆಯಬೇಕು. ಆದರೆ, ಕೆಲ ಗುತ್ತಿಗೆದಾರರು ಇಲಾಖೆ ನಿಯಮಗಳನ್ನು ಗಾಳಿಗೆ ತೂರಿ ನದಿಪಾತ್ರದ ಅಲ್ಲಲ್ಲಿ ಅಡ್ಡಲಾಗಿ ರಸ್ತೆ ನಿರ್ವಿುಸಿಕೊಂಡು ನೀರು ಹರಿದು ಹೋಗದಂತೆ ಮಾಡಿದ್ದಾರೆ.

ಹಿಟಾಚಿ, ಜೆಸಿಬಿ ಮೂಲಕ ನದಿಯ ಆಳ ಪ್ರದೇಶದಲ್ಲಿ ಬೃಹತ್ ಗುಂಡಿಗಳನ್ನು ತೋಡಿ ಮರಳು ತೆಗೆದಿದ್ದಾರೆ. ಬೃಹತ್ ಪ್ರಮಾಣದ ಯಂತ್ರಗಳನ್ನು ಅಳವಡಿಸಿ ಮರಳನ್ನು ಫಿಲ್ಟರ್ ಮಾಡುತ್ತಿದ್ದಾರೆ. ಮರಳನ್ನು ಸ್ಟಾಕ್​ಯಾರ್ಡ್​ಗೆ ತರುವ ಬದಲು ನದಿಪಾತ್ರದಲ್ಲಿಯೇ ಮಾರಾಟ ಮಾಡಿದ್ದಾರೆ. ಇದರಿಂದಾಗಿ ಪರಿಸರಕ್ಕೆ ಬಹಳಷ್ಟು ಹಾನಿಯಾಗಿದೆ ಎಂದು ಆರೋಪಿಸಿ ಸ್ಥಳೀಯ ನಾಗರಿಕರೊಬ್ಬರು ಬೆಂಗಳೂರಿನ ಗಣಿ ಮತ್ತು ವಿಜ್ಞಾನ ಇಲಾಖೆ ನಿರ್ದೇಶಕರಿಗೆ ದೂರು ನೀಡಿದ್ದರು.

ಈ ಕುರಿತು ಸ್ಥಳಕ್ಕೆ ಭೇಟಿ ನೀಡಿದ ಇಲಾಖೆ ಅಧಿಕಾರಿಗಳು ನಿಯಮ ಉಲ್ಲಂಘಿಸಿದ ಐರಣಿಯ 2 ಬ್ಲಾಕ್​ಗೆ ತಲಾ 10 ಲಕ್ಷ ರೂ., ನಂತೆ ಒಟ್ಟು 20 ಲಕ್ಷ ರೂ., ಮುದೇನೂರಿನ 2 ಬ್ಲಾಕ್​ಗೆ ತಲಾ 5 ಲಕ್ಷ ರೂ.ನಂತೆ ಒಟ್ಟು 10 ಲಕ್ಷ ರೂ., ಹಿರೇಬಿದರಿಯ 1 ಬ್ಲಾಕ್​ಗೆ 6 ಲಕ್ಷ ರೂ. ಸೇರಿ ಒಟ್ಟು 36 ಲಕ್ಷ ರೂ. ದಂಡ ಹಾಕಿ, ಹಣ ತುಂಬುವವರೆಗೂ ಮರಳು ವಿತರಿಸಬಾರದು ಎಂದು ಷರತ್ತು ಹಾಕಿದ್ದಾರೆ. ಆದರೆ, ಈವರೆಗೂ ಗುತ್ತಿಗೆದಾರರು ದಂಡ ತುಂಬಿಲ್ಲ. ಆದ್ದರಿಂದ ಮರಳು ವಿತರಣೆ ಇನ್ನೂ ಆರಂಭಗೊಂಡಿಲ್ಲ.

5ರ ಬದಲು 17 ಬಂದಾಗಿದ್ದೇಕೆ?: ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ 5 ಬ್ಲಾಕ್​ಗೆ ದಂಡ ವಿಧಿಸಿದ ಅಧಿಕಾರಿಗಳು ಇನ್ನುಳಿದ 12 ಬ್ಲಾಕ್​ಗಳನ್ನು ಬಂದ್ ಮಾಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ತಾಲೂಕು ಮಟ್ಟದಲ್ಲಿ ಎಲ್ಲೆಡೆ ಮಾಮೂಲಿ ಫಿಕ್ಸ್ ಮಾಡಿಕೊಂಡಿರುವ ಕೆಲ ಗುತ್ತಿಗೆದಾರರು ಹಾಗೂ ಅಧಿಕಾರಿಗಳು, ಜಿಲ್ಲೆಯ ಪ್ರಮುಖ ಜನಪ್ರತಿನಿಧಿಯೊಬ್ಬರಿಗೆ ಮಾಮೂಲಿ ಕೊಡಲು ನಿರಾಕರಿಸಿದ್ದಾರಂತೆ. ಆದ್ದರಿಂದ ಅವರು ರಾಜಕೀಯ ಒತ್ತಡ ತಂದು ದಂಡದ ನೆಪ ಮಾಡಿ ಇನ್ನುಳಿದ ಬ್ಲಾಕ್​ಗಳನ್ನೂ ಬಂದ್ ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಪರಿಸರ ಹಾನಿ ಸೇರಿ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಇಲಾಖೆ ನಿರ್ದೇಶಕರ ಆದೇಶದ ಮೇರೆಗೆ ಮರಳು ವಿತರಣೆ ಬಂದ್ ಮಾಡಲಾಗಿದೆ. ಕೆಲವರಿಗೆ ದಂಡ ಹಾಕಿದ್ದೇವೆ. ಅವರು ಇನ್ನೂ ದಂಡ ತುಂಬಿಲ್ಲ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಅವರಿಂದ ನಿರ್ದೇಶನ ಬಂದ ಬಳಿಕ ಪಾಸ್ ಕೊಡಲು ಕ್ರಮ ಕೈಗೊಳ್ಳಲಾಗುವುದು.
| ಪುಷ್ಪಲತಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕಿ

ನದಿಪಾತ್ರದಲ್ಲಿ ಅಕ್ರಮ ಹಾಗೂ ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಗಣಿಗಾರಿಕೆ ನಡೆದಿರುವುದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೇ ನೇರ ಹೊಣೆಗಾರರು. ಇದರಿಂದಾಗಿ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ದಂಡ ಹಾಕುವ ನೆಪ ಮಾಡಿದ್ದಾರೆ. ಈ ಮೂಲಕ ಮರಳು ವಿತರಣೆ ಬಂದ್ ಮಾಡಿಸಿ ಸಾರ್ವಜನಿಕರಿಗೆ ತೊಂದರೆ ಮಾಡಿದ್ದಾರೆ. ಈ ಕುರಿತು ಇಲಾಖೆಯ ನಿರ್ದೇಶಕರಿಗೂ ದೂರು ನೀಡಿದ್ದೇವೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಮರಳು ವಿತರಿಸಲು ಸರ್ಕಾರ ಮುಂದಾಗಬೇಕು.
| ಕೊಟ್ರೇಶ ಕೆ., ಸ್ಥಳೀಯ ನಾಗರಿಕ

Leave a Reply

Your email address will not be published. Required fields are marked *