ಮಾನ್ಸೂನ್ ಆರಂಭದಲ್ಲೇ ಆರ್ಭಟ ತೋರಿಸುತ್ತಿದೆ ಕಡಲು, ಕೊಚ್ಚಿ ಹೋಗುತ್ತಿವೆ ಕಲ್ಲುಗಳು

ಭಟ್ಕಳ: ಮಾನ್ಸೂನ್ ಆರಂಭದಲ್ಲೇ ತಾಲೂಕಿನ ಬಂದರಿನ ತಲಗೋಡು ವ್ಯಾಪ್ತಿಯ ಸಮುದ್ರದ ದಂಡೆಯ ಕಲ್ಲುಗಳು ಸಮುದ್ರದ ನೀರಿಗೆ ಕೊಚ್ಚಿ ಹೋಗಲು ಆರಂಭಿಸಿವೆ. ಮುಂದಿನ ದಿನಗಳಲ್ಲಿ ಇದು ಯಾವ ಮಟ್ಟ ತಲುಪಲಿದೆಯೋ ಎಂಬ ಆತಂಕ ಸ್ಥಳೀಯರನ್ನು ಕಾಡಲಾರಂಬಿಸಿದೆ.

ತಾಲೂಕಿನ ಮಾವಿನಕುರ್ವೆ ಪಂಚಾಯಿತಿ ವ್ಯಾಪ್ತಿಯ ಬಂದರಿನ ಸಮುದ್ರದ ದಂಡೆಯಲ್ಲಿ ಮೊದಲ ಮಳೆಗೇ ಕಡಲು ತನ್ನ ಆರ್ಭಟ ತೋರಿಸಲು ಆರಂಭಿಸಿದೆ. ಈಗಾಗಲೇ ಕಡಲು ಕೊರೆತವಾಗದಂತೆ ಹಾಕಿದ ಕಲ್ಲುಗಳು ನೀರಿನಲ್ಲಿ ಕೊಚ್ಚಿ ಹೋಗಲು ಆರಂಭಿಸಿವೆ. ಇನ್ನು ಚಂಡಮಾರುತವೇನಾದರೂ ಕರಾವಳಿಗೆ ಅಪ್ಪಳಿಸಿದರೆ ಪರಿಸ್ಥಿತಿ ಗಂಭೀರ ರೂಪ ಪಡೆದುಕೊಳ್ಳುತ್ತದೆ ಎಂಬ ಆತಂಕ ಸ್ಥಳೀಯರಲ್ಲಿ ಮೂಡಿದೆ.

ಹಲವಾರು ವರ್ಷಗಳಿಂದಲೂ ಇಲ್ಲಿ ಶಾಶ್ವತ ತಡೆಗೋಡೆಗೆ ಜನರು ಆಗ್ರಹಿಸುತ್ತ ಬಂದಿದ್ದರೂ ಅವರ ಕನಸು ಇನ್ನೂ ಈಡೇರಿಲ್ಲ. ಪ್ರತಿವರ್ಷ ಮಳೆಗಾಲ ಬರುತ್ತಿರುವಂತೆ ಎಚ್ಚರಗೊಳ್ಳುವ ತಾಲೂಕಾಡಳಿತ ತಾತ್ಕಾಲಿಕವಾಗಿ ಶಿಲೆ ಕಲ್ಲುಗಳನ್ನು ಹಾಕುತ್ತದೆ. ಕರಾವಳಿಯಲ್ಲಿ ಮಳೆಗಾಲ ತೀವ್ರವಾಗುತ್ತಿದ್ದಂತೆ ಕಡಲಿನ ಆರ್ಭಟ ಹೆಚ್ಚಾಗುತ್ತದೆ. ಆದರೆ, ಇಲ್ಲಿನ ಸ್ಥಳೀಯರಿಗೆ ಯಾವುದೆ ಭದ್ರತೆ ಇಲ್ಲ. ಅನಾಹುತ ಸಂಭವಿಸುವ ಮುನ್ನ ಎಚ್ಚತ್ತುಕೊಳ್ಳದ ಇಲಾಖೆ ನಂತರ ತರಾತುರಿಯಲ್ಲಿ ಕ್ರಮ ಕೈಗೊಂಡರೆ ಏನು ಪ್ರಯೋಜನ ಎನ್ನುವುದು ಸ್ಥಳೀಯರ ಅಳಲು. ಮಳೆ ತೀವ್ರಗೊಳ್ಳುವ ಮೊದಲೇ ಸಂಬಂಧಿಸಿದ ಇಲಾಖೆ, ಸ್ಥಳೀಯ ಜನಪ್ರತಿನಿಧಿಗಳು ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಶಾಶ್ವತ ತಡೆಗೋಡೆ ನಿರ್ವಣಕ್ಕಾಗಿ 50 ಲಕ್ಷ ರೂ. ವೆಚ್ಚದ 6 ಯೋಜನೆ ತಯಾರಿಸಿ ಸರ್ಕಾರಕ್ಕೆ ಒಂದು ವರ್ಷದ ಹಿಂದೆಯೇ ಸಲ್ಲಿಸಲಾಗಿದೆ. ಅವುಗಳು ಮಂಜೂರಿಯಾದರೆ ಶಾಶ್ವತ ತಡೆಗೋಡೆ ಕಾಮಗಾರಿ ಆರಂಭವಾಗುತ್ತಿತ್ತು. ಸದ್ಯ 300 ಮೀಟರ್​ಗಳಷ್ಟು ಉದ್ದದ ಸಮುದ್ರದ ಶಾಶ್ವತ ತಡೆಗೋಡೆ ಕಾಮಗಾರಿ ಮುಗಿದಿದೆ. ಇನ್ನೂ 300 ಮೀ. ಗಳಷ್ಟು ಬಾಕಿ ಇದೆ. ಈಗ ಸ್ಥಳ ಪರಿಶೀಲನೆ ನಡೆಸಿ ತುರ್ತು ಕಾಮಗಾರಿ ನಡೆಸಲಾಗುವುದು. | ಟಿ.ಟಿ.ಎಸ್. ಫಾಯದೆ ಎಇಇ ಬಂದರು ಉಪವಿಭಾಗ ಹೊನ್ನಾವರ

Leave a Reply

Your email address will not be published. Required fields are marked *