ಚಿತ್ರದುರ್ಗ: ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ಮಾನಸಿಕ, ದೈಹಿಕ ಲವಲವಿಕೆಗೆ ಸಹಕಾರಿ ಎಂದು ಪ್ರಾಚಾರ್ಯ ಡಾ.ಅನಂತರಾಮು ಹೇಳಿದರು.
ದೇವರಾಜ ಅರಸ್ ಶಿಕ್ಷಣ ಸಂಸ್ಥೆಯಿಂದ ಏಳು ದಿನ ಹಮ್ಮಿಕೊಂಡಿರುವ 2024-25ನೇ ಸಾಲಿನ ಅಂತರ ಶಾಲಾ ಸಾಂಸ್ಕೃತಿಕ ಮತ್ತು ಕ್ರೀಡಾಕೂಟಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು. ಅದಕ್ಕೆ ಶಿಕ್ಷಕರು, ಪಾಲಕರ ಪ್ರೋತ್ಸಾಹ ಮುಖ್ಯ. ಶಾಲಾ ಹಂತದಿಂದ ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಂಡು ಸಾಧಕರಾಗಲು ಶ್ರಮಿಸಿ ಎಂದು ಸಲಹೆ ನೀಡಿದರು.
ಮಕ್ಕಳು ತಮ್ಮ ಪ್ರತಿಭೆ ಅನಾವರಣಗೊಳಿಸಲು ಸಿಗುವ ಅವಕಾಶ ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದರು.
ಪ್ರೌಢಶಾಲಾ, ಪದವಿಪೂರ್ವ, ಪದವಿ, ಬಿಇಡಿ ನರ್ಸಿಂಗ್, ಆಯುರ್ವೇದಿಕ್ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಾಲಿಬಾಲ್ 20 ತಂಡ, ಥ್ರೋಬಾಲ್-25, ಫುಟ್‌ಬಾಲ್-10, ಕ್ರಿಕೆಟ್-8, ಸ್ಕೇಟಿಂಗ್-35, ನೃತ್ಯ-30, ಸಂಗೀತ-22, ರಸಪ್ರಶ್ನೆ-19, ಚರ್ಚಾ ಸ್ಪರ್ಧೆ-25, ಚಿತ್ರಕಲಾ ಸ್ಪರ್ಧೆಯಲ್ಲಿ 30 ತಂಡಗಳು ಪಾಲ್ಗೊಂಡಿದ್ದವು.